ಮುಂಬೈ: ಗುಜರಾತ್ನಲ್ಲಿ ತಲೆ ಎತ್ತುತ್ತಿರುವ ವಿಶ್ವದಲ್ಲೇ ಅತ್ಯಂತ ದೊಡ್ಡ ಕ್ರಿಕೆಟ್ ಮೊಟೇರಾ(ಸರ್ದಾರ್ ವಲ್ಲಭಭಾಯ್ ಪಟೇಲ್) ಸ್ಟೇಡಿಯಂನ ವಿಹಂಗಮ ನೋಟದ ಅದ್ಭುತ ಚಿತ್ರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ನಲ್ಲಿ ಇದೇ ಮೊದಲ ಬಾರಿಗೆ ಶೇರ್ ಮಾಡಿಕೊಂಡಿದೆ.
2014ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿದ್ದ ಈ ಕ್ರೀಡಾಂಗಣವನ್ನು ನವೀಕರಿಸಿರುವ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಫೆಬ್ರವರಿ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಉದ್ಘಾಟನೆ ಮಾಡಿಸಲಿದೆ.
ಮೋದಿಯವರ ಕನಸಿನ ಕ್ರಿಕೆಟ್ ಸ್ಟೇಡಿಯಂ ಆಗಿರುವ ಇದಕ್ಕೆ ಬರೋಬ್ಬರಿ 6 ವರ್ಷಗಳ ಕಾಲ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಈ ಸ್ಟೇಡಿಯಂನಲ್ಲಿ 1 ಲಕ್ಷದ 10 ಸಾವಿರ ಮಂದಿ ಕುಳಿತು ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ದೊಡ್ಡದಾಡ ಕ್ರಿಕೆಟ್ ಸ್ಟೇಡಿಯಂ ಎಂಬ ಕೀರ್ತಿಗೆ ಮೊಟೇರಾ ಸ್ಟೇಡಿಯಂ ಪಾತ್ರವಾಗಲಿದೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿರುವ 1 ಲಕ್ಷ ಮಂದಿ ಕೂರಬಹುದಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿತ್ತು.