ದುಬೈ:ಈ ವರ್ಷದ ಐಪಿಎಲ್ ಯುಎಇಯಲ್ಲಿ ನಡೆಯಲಿದೆ. ಈ ಸಂಬಂಧ ಬಿಸಿಸಿಐ ಸ್ವೀಕಾರ ಪತ್ರವನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಕಳುಹಿಸಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದಾರೆ.
"ಹೌದು, ನಾವು ಸ್ವೀಕಾರ ಪತ್ರವನ್ನು ಇಸಿಬಿಗೆ ಕಳುಹಿಸಿದ್ದೇವೆ. ಎರಡೂ ಮಂಡಳಿಗಳು ಐಪಿಎಲ್ ಟೂರ್ನಿ ನಡೆಸಲು ಇಂದಿನಿಂದ ಒಟ್ಟಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಖಲೀಜ್ ಟೈಮ್ಸ್ ಗೆ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹೇಳಿದ್ದಾರೆ ಎಂದು ವರದಿ ಮಾಡಿದೆ.
ಐಪಿಎಲ್ನ 13ನೇ ಆವೃತ್ತಿಯನ್ನು ಆಯೋಜಿಸಲು ಇಸಿಬಿ ಏಪ್ರಿಲ್ನಲ್ಲಿ ಬಿಸಿಸಿಐಗೆ ಪ್ರಸ್ತಾವನೆ ಕಳುಹಿಸಿತ್ತು. ಕೊರೊನಾ ಹಿನ್ನೆಲೆ ಮಾರ್ಚ್ನಲ್ಲಿ ನಡೆಯಬೇಕಿದ್ದ ಟೂರ್ನಿಯನ್ನ ಬಿಸಿಸಿಐ ಮುಂದೂಡಿಕೆ ಮಾಡಿತ್ತು. ಆ ಬಳಿಕ ಐಸಿಸಿ ಟಿ-20 ವಿಶ್ವಕಪ್ ಮುಂದೂಡಿದ್ದರಿಂದ ಶ್ರೀಮಂತ ಐಪಿಎಲ್ ಟೂರ್ನಿ ನಡೆಯಲು ಹಾದಿ ಸುಗಮವಾಗಿದೆ.
ಈ ಬಾರಿಯ ಐಪಿಎಲ್ ಯುಎಇಯಲ್ಲಿ ನಡೆಯುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಸನ್ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಿವೆ ಎಂದು ಬ್ರಿಜೇಶ್ ಪಟೇಲ್ ಇದೇ ವೇಳೆ ತಿಳಿಸಿದ್ದಾರೆ.
ಯುಎಇಯಲ್ಲಿ ಜೈವಿಕ ಸುರಕ್ಷಿತ ವಾತಾವರಣದಲ್ಲಿ ತರಬೇತಿ ಶಿಬಿರಗಳು ನಡೆಯಲಿವೆ ಎಂದಿರುವ ಐಪಿಎಲ್ ಮಂಡಳಿ ಅಧ್ಯಕ್ಷರು, ತರಬೇತಿಗೆ ಕನಿಷ್ಠ ಮೂರರಿಂದ ನಾಲ್ಕು ವಾರಗಳ ಅಗತ್ಯವಿದೆ ಎಂದು ಹೇಳಿದ್ದಾರೆ. 2020ರ ಐಪಿಎಲ್ ಆವೃತ್ತಿಯು ಸೆಪ್ಟೆಂಬರ್ 19ರಿಂದ ನವೆಂಬರ್ 8 ರವರೆಗೆ ನಡೆಯಲಿದೆ ಎಂದು ಬ್ರಿಜೇಶ್ ಪಟೇಲ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.