ಬೆಂಗಳೂರು: ಬಿಸಿಸಿಐ ಅಧ್ಯಕ್ಷನಾಗಿ ಆಯ್ಕೆಯಾಗುತ್ತಿದ್ದಂತೆ ಚಾಕಚಕ್ಯತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಸೌರವ್ ಗಂಗೂಲಿ ಬೆಂಗಳೂರಿನಲ್ಲಿರುವ ಎನ್ಸಿಎಗೆ ಭೇಟಿ ನೀಡಿದ್ದರು.
ಕನ್ನಡಿಗ ದ್ರಾವಿಡ್ ಮುಖ್ಯಸ್ಥನಾಗಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿನ ಅಭಿವೃದ್ಧಿ, ಬದಲಾವಣೆಯ ಬಗ್ಗೆ ಚರ್ಚಿಸಿ ಹಿಂತಿರುಗುವಾಗ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಹಾಗೂ ಸೆಕ್ಯುರಿಟಿ ಸಿಬ್ಬಂದಿ ದಾದಾ ಜೊತೆಗಾಗಿ ಸೆಲ್ಫಿಗಾಗಿ ಮುಗಿಬಿದ್ದರು.
ಅಭಿಮಾನಿಗಳ ಪ್ರೀತಿಗೆ ಮನಸೋತಿರುವ ಸೌರವ್ ಗಂಗೋಲಿ, ಜನರ ಪ್ರೀತಿ ನಿಮ್ಮನ್ನು ತಂಬಾ ಕೃತಜ್ಞನಾಗಿಸುತ್ತದೆ ಎಂದು ಬರೆದುಕೊಂಡು ವೋಟೋವೊಂದನ್ನು ದಾದಾ ಶೇರ್ ಮಾಡಿದ್ದಾರೆ.
ಸದ್ಯಕ್ಕೆ ಈ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲೂ ಕೆಲವು ಅಭಿಮಾನಿಗಳು, ಭಾರತದ ಕ್ರಿಕೆಟ್ ಅಗತ್ಯವಾದ ಕೆಲಸಗಳನ್ನು ಹೇಗೆ ಮಾಡಬೇಕೆಂದು ನೀವು ತೋರಿಸಿಕೊಡಿ. ನಾವೆಲ್ಲರೂ ನಿಮ್ಮೊಂದಿಗಿರುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ.
ರಾಹುಲ್ ದ್ರಾವಿಡ್ ಜೊತೆ ನಡೆದ ಚರ್ಚೆಯಲ್ಲಿ ಎನ್ಸಿಎಗೆ ಹೊಸ ಕಟ್ಟಡ ಕಟ್ಟಲು ಕರ್ನಾಟಕ ಸರ್ಕಾರ ನೀಡಿರುವ ಜಾಗಕ್ಕೆ ಎನ್ಸಿಎ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವರ್ಷದ ಮೇ ತಿಂಗಳಲ್ಲಿ ಕರ್ನಾಟಕ ಸರ್ಕಾರ 25 ಎಕರೆ ಜಾಗವನ್ನು ಎನ್ಸಿಎಗೆ ಗುತ್ತಿಗೆ ಆದಾರದಲ್ಲಿ 99 ವರ್ಷಗಳಿಗೆ ಬಿಟ್ಟುಕೊಟ್ಟಿತ್ತು. ಇದೀಗ ಎನ್ಸಿಎ ಒಟ್ಟು ವಿಸ್ತೀರ್ಣ 40 ಎಕರೆಯಾಗಿದ್ದು, ಬಿಸಿಸಿಐ ಈ ಸ್ಥಳದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಸುಸಜ್ಜಿತವಾದ ಕಟ್ಟಡ, ಮೂರು ಕ್ರಿಕೆಟ್ ಗ್ರೌಂಡ್, ಆಡಳಿತ ಕಟ್ಟಡಗಳು, ಒಳಾಂಗಣ ಕ್ರೀಡಾಂಗಣ ಹಾಗೂ ಹೋಟೆಲ್ಗಳನ್ನು ನಿರ್ಮಿಸಲು ತೀರ್ಮಾನಿಸಿದೆ.