ಮುಂಬೈ:ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಟೀಂ ಇಂಡಿಯಾ ಓಪನರ್ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ನಾಮ ನಿರ್ದೇಶನ ಮಾಡಿದೆ.
ಅರ್ಜುನ ಪ್ರಶಸ್ತಿಗಾಗಿ ವೇಗಿ ಇಶಾಂತ್ ಶರ್ಮಾ, ಓಪನರ್ ಶಿಖರ್ ಧವನ್ ಮತ್ತು ಮಹಿಳಾ ಕ್ರಿಕೆಟ್ ಆಟಗಾರ್ತಿ ದೀಪ್ತಿ ಶರ್ಮಾ ಅವರನ್ನು ಬಿಸಿಸಿಐ ನಾಮ ನಿರ್ದೇಶನ ಮಾಡಿದೆ. ಈ ನಾಲ್ವರ ಹೆಸರುಗಳನ್ನು 2020ರ ಕ್ರೀಡಾ ಪುರಸ್ಕಾರಕ್ಕಾಗಿ, ಕ್ರೀಡಾ ಸಚಿವಾಲಯಕ್ಕೆ ಕಳುಹಿಸಲಾಗಿದೆ.
ರೋಹಿತ್ ಶರ್ಮಾ ಪ್ರಸ್ತುತ ಟೀಮ್ ಇಂಡಿಯಾ ಸೀಮಿತ ಓವರ್ನ ಕ್ರಿಕೆಟ್ ತಂಡದ ಉಪನಾಯಕ. 2019ರ ವರ್ಷದ ಏಕದಿನ ಕ್ರಿಕೆಟಿಗ ಎಂದು ಐಸಿಸಿ ಸನ್ಮಾನಿಸಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಐದು ಶತಕಗಳನ್ನು ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಹಿಟ್ ಮ್ಯಾನ್ ಪಾತ್ರರಾಗಿದ್ದಾರೆ
ಶಿಖರ್ ಧವನ್ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ಬಾರಿ ಗೋಲ್ಡನ್ ಬ್ಯಾಟ್ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿಯಾಗಿದ್ದಾರೆ. ವೇಗವಾಗಿ 4000 ಮತ್ತು 5000 ರನ್ ಗಳಿಸಿದ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಟೀಂ ಇಂಡಿಯಾ ಪರ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ದಾಖಲೆಯನ್ನು ಇಶಾಂತ್ ಶರ್ಮಾ ಹೊಂದಿದ್ದಾರೆ. ಏಷ್ಯಾದ ಹೊರಗೂ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಭಾರತೀಯ ವೇಗಿ ಇಶಾಂತ್.
ಇತ್ತ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ದೀಪ್ತಿ ಶರ್ಮಾ ಹೊಂದಿದ್ದಾರೆ. ಉತ್ತಮ ಪ್ರದರ್ಶನದಿಂದ ತಂಡಕ್ಕೆ ಹಲವು ಬಾರಿ ಆಸರೆಯಾಗಿದ್ದಾರೆ. ಕ್ರಿಕೆಟ್ಗೆ ಈ ನಾಲ್ವರು ಆಟಗಾರರ ಕೊಡುಗೆಯನ್ನ ಪರಿಗಣಿಸಿರುವ ಬಿಸಿಸಿಐ ಕ್ರೀಡಾ ಪುರಸ್ಕಾರಕ್ಕೆ ನಾಮ ನಿರ್ದೇಶನ ಮಾಡಿದೆ.