ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ವೈಟ್ - ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಸಾಧಕರಲ್ಲಿ ಒಬ್ಬರು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಸುರೇಶ್ ರೈನಾ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪ್ರಮುಖ ಪ್ರದರ್ಶನ ನೀಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಬಂದು, ಪಂದ್ಯವನ್ನು ಗೆಲ್ಲಿಸಿಕೊಡಲು ಸಾಕಷ್ಟು ಕೌಶಲ್ಯ ಮತ್ತು ಪ್ರತಿಭೆ ಬೇಕಾಗುತ್ತದೆ ಎಂದು ಗಂಗೂಲಿ ಬಿಸಿಸಿಐ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಅವರು ಯುವರಾಜ್ ಸಿಂಗ್ ಮತ್ತು ಎಂ.ಎಸ್. ಧೋನಿ ಅವರೊಂದಿಗೆ ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ದೃಢವಾದ ಮಧ್ಯಮ ಕ್ರಮಾಂಕವನ್ನು ರೂಪಿಸಿದ್ದರು. ಅವರಿಗೆ ಮತ್ತು ಅವರ ಕುಟುಂಬಕ್ಕೆ ನಾನು ಶುಭ ಹಾರೈಸುತ್ತೇನೆ' ಎಂದು ಗಂಗೂಲಿ ಹೇಳಿದ್ದಾರೆ.
ಬಿಸಿಸಿಐನ ಕಾರ್ಯದರ್ಶಿ ಜೈ ಷಾ ಕೂಡ ರೈನಾ ವೃತ್ತಿಜೀವನಕ್ಕೆ ಅಭಿನಂದಿಸಿದ್ದಾರೆ. ಅಲ್ಲದೇ ಟಿ-20 ಮಾದರಿಯಲ್ಲಿ ರೈನಾ ಅತ್ಯುತ್ತಮ ಆಟಗಾರ ಎಂದು ಕೊಂಡಾಡಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಕೆಲ ನಿಮಿಷಗಳಲ್ಲೇ ರೈನಾ ಕೂಡ ನಿವೃತ್ತಿ ಘೋಷಣೆ ಮಾಡಿದ್ದರು.