ಮುಂಬೈ: ಬಿಸಿಸಿಐ ಕೊಡಮಾಡುವ ವಾರ್ಷಿಕ 2018-19ನೇ ಸಾಲಿನ ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 827 ರನ್ ಸಿಡಿಸಿರುವ ಮಯಾಂಕ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬೆಸ್ಟ್ ಆಟಗಾರರ ವಿಭಾಗದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ವರ್ಷ ನಡೆದ ಟೆಸ್ಟ್ ಟೂರ್ನಿಯಲ್ಲಿ ಮಯಾಂಕ್ ದ್ವಿಶತಕ ಸಿಡಿಸಿ ಮಿಂಚಿದ್ದರು.
ವನಿತೆಯರ ವಿಭಾಗದಲ್ಲಿ ಭವಿಷ್ಯದ ತಾರೆ ಶಫಾಲಿ ವರ್ಮಾ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬೆಸ್ಟ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಭಾರತ ವನಿತೆಯರ ತಂಡದಲ್ಲಿ ಕೇವಲ ಟಿ-20 ಪಂದ್ಯಗಳನ್ನಾಡಿರುವ ಶಫಾಲಿ 9 ಪಂದ್ಯಗಳಿಂದ 222 ರನ್ ಸಿಡಿಸಿದ್ದು 73 ರನ್ ವಯಕ್ತಿಕ ಗರಿಷ್ಠ ರನ್ಗಳಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲೇ ಅರ್ಧಶತಕ ಸಿಡಿಸಿದ ದಾಖಲೆ ಶಫಾಲಿ ಹೆಸರಲ್ಲಿದೆ. ಇದಕ್ಕೂ ಮೊದಲು ಸಚಿನ್ ಈ ದಾಖಲೆ ಹೊಂದಿದ್ದರು.