ಮುಂಬೈ: ಇತ್ತೀಚೆಗೆ ಸಿಇಒ ಸ್ಥಾನಕ್ಕೆ ರಾಹುಲ್ ಜೋಹ್ರಿ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿರುವ ಬಿಸಿಸಿಐ ಅವರ ಸ್ಥಾನಕ್ಕೆ ಹಂಗಾಮಿ ಸಿಇಒ ಆಗಿ ಐಪಿಎಲ್ನ ಸಿಇಒ ಹೇಮಂಗ್ ಅಮಿನ್ ಅವರನ್ನು ನೇಮಕ ಮಾಡಿರುವುದಾಗಿ ಸೋಮವಾರ ತಿಳಿಸಿದೆ.
ಕಳೆದ ಎರಡು ವರ್ಷಗಳಿಂದ ಹೇಮಂಗ್ ಅಮಿನ್ ಅವರು ಬಿಸಿಸಿಐನಲ್ಲಿ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರನ್ನು ಬಿಸಿಸಿಐ ಹಂಗಾಮಿ ಸಿಒ ಆಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹುದ್ದೆಗೆ ಅಮಿನ್ ಸರಿಯಾದ ವ್ಯಕ್ತಿ. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಬಿಸಿಸಿಐಗೆ ಅವರು ನೀಡಿರುವ ಕೊಡುಗೆ ಜೋಹ್ರಿಗಿಂತ ಮೈಲಿಗಳಷ್ಟು ಮುಂದಿದೆ. ಅವರು ಬಿಸಿಸಿಐನ ಹಣಕಾಸು ಸಂಬಂಧಿತ ವ್ಯವಹಾರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಐಪಿಎಲ್ ಉದ್ಘಾಟನಾ ಸಮಾರಂಭದ ಬದಲಾಗಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ದೇಣಿಗೆ ನೀಡುವ ಕುರಿತು ನಿರ್ಧಾರ ಕೈಗೊಂಡ ಬಿಸಿಸಿಐ ತೀರ್ಮಾನದಲ್ಲಿ ಹೇಮಂಗ್ ಅವರ ಪಾತ್ರ ಪ್ರಮುಖವಾಗಿತ್ತು ಎಂದು ತಿಳಿದು ಬಂದಿದೆ.