ನವದೆಹಲಿ: ಬಿಸಿಸಿಐ ಅನುಮತಿ ಪಡೆಯದೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟಿಕೆಆರ್ ತಂಡದ ಜರ್ಸಿ ತೊಟ್ಟು ಡ್ರೆಸ್ಸಿಂಗ್ ರೂಮಿನಲ್ಲಿ ಕುಳಿತು ಪಂದ್ಯ ವೀಕ್ಷಿಸಿ ಬಿಸಿಸಿಐ ನಿಯಮ ಉಲ್ಲಂಘನೆ ಮಾಡಿ ನೋಟೀಸ್ ಪಡೆದಿದ್ದ ಕಾರ್ತಿಕ್ ಅಪಾಲಜಿ ಪತ್ರ ಬರೆದು ಕ್ಷಮೆ ಕೇಳಿದ್ದರಿಂದ ಬಿಸಿಸಿಐ ಕ್ಷಮಾಪಣೆಯನ್ನು ಸ್ವೀಕರಿಸಿದೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಶಾರುಖ್ ಖಾನ್ ಮಾಲಿಕತ್ವದ ಟ್ರಿಂಬ್ಯಾಗೊ ನೈಟ್ ರೈಡರ್ಸ್ ತಂಡದ ಪರ ಜರ್ಸಿ ತೊಟ್ಟು ಪಂದ್ಯ ವೀಕ್ಷಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಕ್ಕಾಗಿ ಬಿಸಿಸಿಐ ಕಾರ್ತಿಕ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ಗೆ ಉತ್ತರಿಸಿರುವ ಕಾರ್ತಿಕ್ ತಮ್ಮ ತಪ್ಪನ್ನು ಒಪ್ಪಿಕೊಂಡು ಬೇಷರತ್ ಕ್ಷಮೆ ಕೋರಿದ್ದಾರೆ.
ಕೆಕೆಆರ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರ ಕೋರಿಕೆಯ ಮೇರೆಗೆ ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆದಿದ್ದ ಪಂದ್ಯಕ್ಕೆ ಹಾಜರಾಗಿದ್ದೆ. ಮೆಕಲಮ್ ಒತ್ತಾಯದ ಮೇರೆಗೆ ಟಿಕೆಆರ್ ಜರ್ಸಿ ಧರಿಸಿ ಪಂದ್ಯವನ್ನು ವೀಕ್ಷಿಸಿರುವುದಾಗಿ ತಿಳಿಸಿರುವ ಕಾರ್ತಿಕ್, ತಮ್ಮ ತಪ್ಪಿಗೆ ಕ್ಷಮೆ ಕೋರಿದ್ದಾರೆ. ಇದನ್ನು ಮನ್ನಿಸಿರುವ ಬಿಸಿಸಿಐ ಕಾರ್ತಿಕ್ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ತಿಳಿಸಿದೆ.
ಐಪಿಎಲ್ನಲ್ಲಿ ಕೆಕೆಆರ್ ಒಡೆಯನಾಗಿರುವ ಶಾರುಖ್ ಖಾನ್ ಸಿಪಿಎಲ್ನಲ್ಲೂ ಟಿಕೆಆರ್ ಮಾಲೀಕರಾಗಿದ್ದಾರೆ. ಎರಡೂ ತಂಡಕ್ಕೂ ಬ್ರೆಂಡಮ್ ಮೆಕಲಮ್ ಕೋಚ್ ಆಗಿದ್ದಾರೆ. ಇವರ ಕೋರಿಕೆಯ ಮೇರೆಗೆ ಕಾರ್ತಿಕ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾಲ್ಗೊಂಡು ಸಂಕಷ್ಟಕ್ಕೀಡಾಗಿದ್ದರು. ಸದ್ಯ ಬಿಸಿಸಿಐ ಕ್ಷಮೆ ಸ್ವೀಕರಿಸರುವುದರಿಂದ ಕಾರ್ತಿಕ್ ನಿರಾಳರಾಗಿದ್ದಾರೆ.
ಬಿಸಿಸಿಐ ಒಪ್ಪಂದದ ಪ್ರಕಾರ ಯಾವುದೇ ಒಬ್ಬ ಆಟಗಾರ ಬಿಸಿಸಿಐ ಅನುಮತಿ ಪಡೆಯದೇ ಬಿಸಿಸಿಐ ವ್ಯಾಪ್ತಿಯ ಹೊರಗೆ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವಂತಿಲ್ಲ. ಒಂದು ವೇಳೆ ಅನುಮತಿ ಪಡೆಯದೇ ಯಾವುದೇ ಕ್ರಿಕೆಟ್ನಲ್ಲಿ ಪಾಲ್ಗೊಂಡರೆ ಅವರಿಗೆ ನಿಷೇಧದ ಶಿಕ್ಷೆಯನ್ನು ಬಿಸಿಸಿಐ ವಿಧಿಸಲಿದೆ.