ಮೆಲ್ಬೋರ್ನ್:ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಎದುರಾಳಿ ತಂಡದ ಆಟಗಾರನ ಬಗ್ಗೆ ವೈಯಕ್ತಿಕ ನಿಂದನೆ ಮಾಡಿದ್ದ ಘಟನೆ ನಡೆದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಟಗಾರನಿಗೆ ಭಾರಿ ಮೊತ್ತದ ದಂಡ ವಿಧಿಸಿ ಅಶಿಸ್ತಿನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಿದೆ.
ಶನಿವಾರ ನಡೆದ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದ ವೇಳೆ ರಾಷ್ಟ್ರೀಯ ತಂಡದ ಸಹ ಆಟಗಾರನನ್ನು ಸ್ಟೋಯ್ನಿಸ್ ನಿಂದಿಸಿದ್ದರು. ಇದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಗಂಭೀರವಾಗಿ ಪರಿಗಣಿಸಿದೆ. ಸ್ಟೋಯ್ನಿಸ್ ನಡವಳಿಕೆ ಆಟದ ನಿಯಮಾವಳಿಯ ಕಲಂ 2.1.3 ರ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಿರುವ ಮಂಡಳಿ ಅವರಿಗೆ 3.7 ಲಕ್ಷ ರೂ (7,500 ಆಸ್ಟ್ರೇಯನ್ ಡಾಲರ್) ದಂಡ ವಿಧಿಸಿದೆ.
ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿರುವ ಸ್ಟೋಯ್ನಿಸ್ ಕ್ರಿಕೆಟ್ ಆಸ್ಟ್ರೇಲಿಯಾದ ಕ್ರಮಕ್ಕೆ ಬದ್ದ ಎಂದು ಒಪ್ಪಿಕೊಂಡಿದ್ದಾರೆ. ಸಹ ಆಟಗಾರ ರಿಚರ್ಡ್ಸನ್ ಅವರನ್ನು ನಿಂದಿಸಿದ ಕ್ಷಣವೇ ತನಗೆ ತಪ್ಪಿನ ಅರಿವಾಗಿದ್ದು, ನಡೆದ ಘಟನೆಗೆ ಕ್ಷಮೆಯಾಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಸ್ಟೋಯ್ನಿಸ್ ವಿರುದ್ಧ ಅಂಪೈರ್ ಗೆರಾಡ್ ಅಬೋಡ್ ಮತ್ತು ಫಿಲಿಪ್ ಗಿಲ್ಲೆಸ್ಪಿ ಮ್ಯಾಚ್ ರೆಫ್ರಿ ಡೇರಿಲ್ ಹಾರ್ಪರ್ಗೆ ದೂರು ನೀಡಿದ್ದರು. ಪಂದ್ಯದ ನಡುವೆ ಆಟಗಾರರ ನಡವಳಿಕೆಗಳು ಆಟದ ಮಾನದಂಡಗಳಿಗೆ ಒಳಪಟ್ಟಿರುತ್ತದೆ. ಹಾಗಾಗಿ ನಿಯಮಾವಳಿಗಳನ್ನು ಮೀರುವ ಆಟಗಾರರನ್ನು ದಂಡಿಸಲಾಗುತ್ತದೆ. ಆಟದಲ್ಲಿ ಅಶಿಸ್ತಿಗೆ ಸ್ಥಾನವಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಕಡ್ಡಿ ಮುರಿದಂತೆ ಹೇಳಿದ್ದು, ಇತರೆ ಆಟಗಾರರಿಗೂ ಎಚ್ಚರಿಕೆ ಕೊಟ್ಟಿದೆ.