ಹೈದರಾಬಾದ್:ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ತಮ್ಮ ಐಪಿಎಲ್ ಟೀಮ್ಮೇಟ್ ಆಗಿರುವ ಅಫ್ಘಾನಿಸ್ತಾನ ಮುಜೀಬ್ ಉರ್ ರಹಮಾನ್ ಅವರ ಕಾಲೆಳೆದಿದ್ದಾರೆ. ಮುಜೀಬ್ಗೆ ನಾನು ರಿವರ್ಸ್ ಸ್ವೀಪ್ ಹೇಗೆ ಮಾಡುವುದು ಎಂದು ಕಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮ್ಯಾಕ್ಸ್ವೆಲ್ ಮತ್ತು ಮುಜೀಬ್ 13ನೇ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. ಆದರೆ ಆಸೀಸ್ ಆಲ್ರೌಂಡರ್ ಇಡೀ ಟೂರ್ನಿಯಲ್ಲಿ ಭಾರಿ ವೈಫಲ್ಯ ಅನುಭವಿಸಿ 13 ಪಂದ್ಯಗಳಿಂದ 108 ರನ್ ಗಳಿಸಿದ್ದರು. ಅವರು ಇಡೀ ಟೂರ್ನಿಯಲ್ಲಿ ಒಂದು ಸಿಕ್ಸರ್ ಕೂಡ ಸಿಡಿಸಲಿಲ್ಲ ಎನ್ನುವುದು ವಿಪರ್ಯಾಸ.
ಇನ್ನು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಬಿಎಲ್ನಲ್ಲಿ ಅವರು ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಬ್ರಿಸ್ಬೇನ್ ತಂಡದ ಮುಜೀಬ್ ಅಡಿಲೇಡ್ ತಂಡದ ತಮ್ಮದೇ ದೇಶದ ರಶೀದ್ ಖಾನ್ ಬೌಲಿಂಗ್ನಲ್ಲಿ ರಿವರ್ಸ್ ಸ್ವೀಪ್ ಮೂಲಕ ಬೌಂಡರಿ ಬಾರಿಸಿದರು. ಇದಕ್ಕೆ ಟ್ವೀಟ್ ಮೂಲಕ ಮುಜೀಬ್ ಕಾಲೆಳೆದಿದ್ದಾರೆ.
"ನಾನು ಕಳೆದ ಐಪಿಎಲ್ನಲ್ಲಿ ಹೆಚ್ಚೇನು ಮಾಡಲಾಗಲಿಲ್ಲ. ಆದರೆ ನಾನು ಮುಜೀಬ್ಗೆ ರಿವರ್ಸ್ ಸ್ವೀಪ್ ಹೇಗೆ ಆಡಬೇಕೆಂದು ಕಲಿಸಿದ್ದೇನೆ ಎಂದು ಖಾತರಿಪಡಿಸುತ್ತೇನೆ" ಎಂದು ಟ್ವೀಟ್ ಮೂಲಕ ತಮಾಷೆ ಮಾಡಿದ್ದಾರೆ.
ಮುಜೀಬ್ ಇಂದಿನ ಪಂದ್ಯದಲ್ಲಿ 10 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 18 ರನ್ ಗಳಿಸಿದರು. ನಾಯಕ ಜಿಮ್ಮಿ ಪಿಯರ್ಸನ್ 36 ಎಸೆತಗಳಲ್ಲಿ 69 ರನ್ ಸಿಡಿಸಿದರೂ ಪಂದ್ಯವನ್ನು ಕೇವಲ 2 ರನ್ಗಳಿಂದ ಸೋಲುವ ಮೂಲಕ ಬ್ರಿಸ್ಬೇನ್ ಹೀಟ್ಸ್ ನಿರಾಶೆ ಅನುಭವಿಸಿತು.