ಚಟ್ರೋಗ್ರಾಮ್ :ಪ್ರಮುಖ ಆಟಗಾರರಿಲ್ಲದ ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಅತಿಥೇಯ ಬಾಂಗ್ಲಾದೇಶ ತಂಡ ಏಕದಿನ ಸರಣಿಯನ್ನು 3-0ಯಲ್ಲಿ ವೈಟ್ವಾಶ್ ಸಾಧಿಸಿದೆ.
ಢಾಕಾದಲ್ಲಿ ನಡೆದಿದ್ದ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿ ಗೆಲುವು ಖಚಿತ ಪಡಿಸಿಕೊಂಡಿದ್ದ ಬಾಂಗ್ಲಾದೇಶ ತಂಡ, ಇಂದು ಔಪಚಾರಿಕವಾಗಿ ಚಟ್ಟೋಗ್ರಾಮ್ನಲ್ಲಿ ನಡೆದ ಕೊನೆಯ ಪಂದ್ಯದಲ್ಲೂ 120 ರನ್ಗಳ ಬೃಹತ್ ಅಂತರದ ಜಯ ಸಾಧಿಸಿ ಸರಣಿ ವೈಟ್ವಾಷ್ ಸಾಧಿಸಿತು.
ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಪರ ನಾಯಕ ತಮೀಮ್ ಇಕ್ಬಾಲ್ 64, ರಹೀಮ್ 64, ಮಹ್ಮದುಲ್ಲಾ 64 ಹಾಗೂ ಶಕಿಬ್ ಅಲ್ ಹಸನ್ 51 ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 297 ರನ್ಗಳಿಸಿತ್ತು.
298ರನ್ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 44.2 ಓವರ್ಗಳಲ್ಲಿ 177 ರನ್ಗಳಿಗೆ ಆಲೌಟ್ ಆಗುವ ಮೂಲಕ 120 ರನ್ಗಳ ಸೋಲು ಕಂಡಿತು. 47 ರನ್ಗಳಿಸಿದ ರೋವ್ಮನ್ ಪೋವೆಲ್ ತಂಡದ ಗರಿಷ್ಠ ಸ್ಕೋರರ್ ಆದರು.
ಬಾಂಗ್ಲಾದೇಶದ ಪರ ಮೊಹಮ್ಮದ್ ಸೈಫುದ್ದೀನ್ 51ಕ್ಕೆ 3, ಮುಸ್ತಾಫಿಜುರ್ ರಹಮಾನ್ 24ಕ್ಕೆ 2, ಮೆಹಿದಿ ಹಸನ್ 18ಕ್ಕೆ 2 ಹಾಗೂ ತಸ್ಕಿನ್ ಅಹ್ಮದ್ ಮತ್ತು ಸೌಮ್ಯ ಸರ್ಕಾರ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮುಶ್ತೀಕರ್ ರಹೀಮ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರೆ, ಶಕಿಬ್ ಅಲ್ ಹಸನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಎರಡು ತಂಡಗಳ ನಡುವಿನ ಟೆಸ್ಟ್ ಸರಣಿ ಫೆಬ್ರವರಿ 3ರಿಂದ ಆರಂಭವಾಗಲಿದೆ.
ಇದನ್ನು ಓದಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಂದೂಡಿಕೆ.. ಜೂನ್ 18-22ರವರೆಗೆ ನಡೆಯುವ ಸಾಧ್ಯತೆ