ಡಾಕಾ: ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್ಮನ್ ಸೈಫ್ ಹಸನ್ ಹಾಗೂ ಕಂಡೀಷನಿಂಗ್ ಕೋಚ್ ನಿಕ್ ಲೀಗೆ ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟಿದೆ ಅಂತಾ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಮಂಗಳವಾರ ಖಚಿತಪಡಿಸಿದೆ.
ಸೋಮವಾರ ಬೋರ್ಡ್ ಶ್ರೀಲಂಕಾ ವಿರುದ್ಧದ ಸರಣಿಗಾಗಿ 17 ಆಟಗಾರರು ಮತ್ತು 7 ಸಿಬ್ಬಂದಿಯ ಮಾದರಿ ತೆಗೆದುಕೊಂಡಿತ್ತು ಎಂದು ತಿಳಿದು ಬಂದಿದೆ. ಅದರಲ್ಲಿ ಈ ಇಬ್ಬರಿಗೆ ಪಾಸಿಟಿವ್ ಇರುವುದು ಖಚಿತವಾಗಿದೆ. ಪ್ರಸ್ತುತ ಸೈಫ್ ಮತ್ತು ಲೀ ಕ್ವಾರಂಟೈನ್ನಲ್ಲಿದ್ದಾರೆ. ಮುಂದಿನ ಪರೀಕ್ಷೆಯಲ್ಲಿ ನೆಗೆಟಿವ್ ಬಂದರಷ್ಟೇ ಅವರು ಶ್ರೀಲಂಕಾ ತಂಡದ ಪರ ಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.
ಆಶ್ಚರ್ಯಕರ ಸಂಗತಿ ಅಂದರೆ ನಿಕ್ ಲೀ ಈಗಾಗಲೇ ಒಮ್ಮೆ ಆಗಸ್ಟ್ 14ರಂದು ದುಬೈನಲ್ಲಿ ಟೆಸ್ಟ್ನಲ್ಲಿ ಒಳಗಾಗಿಪಾಸಿಟಿವ್ ವರದಿ ಪಡೆದಿದ್ದರು. 10 ದಿನಗಳ ನಂತರ ಆಗಸ್ಟ್ 23ರಂದು ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಪಡೆದ ನಂತರವಷ್ಟೇ ದುಬೈನಿಂದ ಡಾಕಾಗೆ ಬಂದಿಳಿದಿದ್ದರು.
ಡಾಕಾದಲ್ಲೂ 14 ದಿನಗಳ ಕಾಲ ಕ್ವಾರಂಟೈನ್ ಸಹ ಪೂರ್ಣಗೊಳಿಸಿದ್ದರು. ಆದರೂ ಮತ್ತೆ ಅವರಿಗೆ ಪಾಸಿಟಿವ್ ವರದಿ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಸಿಬಿ ಮುಖ್ಯ ಆಯ್ಕೆಗಾರ ಮಿನ್ಹಾಜುಲ್ ಅಬೆದೆನ್ ಅವರ ಪ್ರಕಾರ, ಇದೀಗ ಸೆಪ್ಟೆಂಬರ್ 17ರಂದು ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಮುನ್ನ ಸೆ.9ರಿಂದ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಟಗಾರರು ತರಬೇತಿ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾ ಪಾಸಿಟಿವ್ ಬಂದಿರುವ ಸೈಫ್ಗೆ ತಂಡದ ಬಾಗಿಲು ಮುಚ್ಚಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಸಿಬಿ ಅಧಿಕಾರಿಗಳು, ಮುಂಬರುವ ದಿನಗಳಲ್ಲಿ ಅವರಿಗೆ ಮತ್ತೊಂದು ಸುತ್ತಿನ ಪರೀಕ್ಷೆ ಮಾಡಲಾಗುವುದು. ಅದರ ಫಲಿತಾಂಶದ ಮೇಲೆ ಅವರ ಭವಿಷ್ಯ ನಿಂತಿದೆ ಎಂದು ತಿಳಿಸಿದ್ದಾರೆ.