ಡಬ್ಲಿನ್:ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿದ ಬಾಂಗ್ಲಾದೇಶವು ಐತಿಹಾಸಿಕ ಸಾಧನೆ ಮಾಡಿದೆ.
ಡಬ್ಲಿನ್ನಲ್ಲಿ ನಡೆದ ಸರಣಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ, ಕೆರಿಬಿಯನ್ನರನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಉತ್ತಮ ಆರಂಭ ಪಡೆದ ವಿಂಡೀಸ್ 24 ಓವರ್ಗಳಲ್ಲಿ ಒಂದು ವಿಕೆಟ್ಗೆ 152 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ತಂಡಕ್ಕೆ ಆರಂಭಿಕರಾದ ಶೈ ಹೋಪ್ 74 ಹಾಗೂ ಸುನಿಲ್ ಆಂಬ್ರಿಸ್ 69 ರನ್ ಬಾರಿಸಿ ವಿಂಡೀಸ್ಗೆ ಒಳ್ಳೆಯ ಆರಂಭ ನೀಡಿದ್ದರು.
ಮಳೆಯಿಂದಾಗಿ ಪಂದ್ಯವನ್ನು 24 ಓವರ್ಗೆ ಸೀಮಿತಗೊಳಿಸಿ ಬಾಂಗ್ಲಾಕ್ಕೆ 210 ರನ್ಗಳ ಗೆಲುವಿನ ಗುರಿ ನೀಡಲಾಯಿತು. ರನ್ ಬೆನ್ನಟ್ಟಿದ ಮೊರ್ತಜಾ ಪಡೆ, 22.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ಆರಂಭಿಕ ಆಟಗಾರ ಸೌಮ್ಯ ಸರ್ಕಾರ್ 66, ಮುಷ್ಫಿಕರ್ ರಹೀಮ್ 36 ಹಾಗೂ ಮೊಸಾದ್ದೇಕ್ ಹೊಸೇನ್ ಅಜೇಯ 52 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾಂಗ್ಲಾದ ಮೊಸಾದ್ದೇಕ್ ಹೊಸೇನ್ ಪಂದ್ಯ ಪುರುಷ ಹಾಗೂ ವಿಂಡೀಸ್ನ ಶೈ ಹೋಪ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬಾಂಗ್ಲಾಕ್ಕೆ ಐತಿಹಾಸಿಕ ಸರಣಿ:
ಇನ್ನು ವಿಂಡೀಸ್ ಮಣಿಸಿದ ಬಾಂಗ್ಲಾ ಮೊದಲ ಬಾರಿಗೆ ಎರಡಕ್ಕಿಂತ ಹೆಚ್ಚು ದೇಶಗಳು ಪಾಲ್ಗೊಂಡಿದ್ದ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಇದಕ್ಕೂ ಮುನ್ನ ಬಾಂಗ್ಲಾ ದ್ವಿಪಕ್ಷೀಯ ಸರಣಿಗಳನ್ನು ಮಾತ್ರ ಗೆದ್ದಿತು. ಮುಶ್ರಫೆ ಮೊರ್ತಜಾ ಈ ಸಾಧನೆಗೈದ ಮೊದಲ ಬಾಂಗ್ಲಾ ನಾಯಕರಾಗಿ ಹೊರಹೊಮ್ಮಿದರು. ಐರ್ಲೆಂಡ್ ಕೂಡ ಪಾಲ್ಗೊಂಡಿದ್ದ ಈ ಸರಣಿಯಲ್ಲಿ, ಬಾಂಗ್ಲಾ ವಿರುದ್ಧದ ಎಲ್ಲ ಪಂದ್ಯಗಳಲ್ಲೂ ವಿಂಡೀಸ್ ಸೋಲು ಕಂಡಿತು.