ಕ್ರೈಸ್ಟ್ಚರ್ಚ್: ಪಾಕಿಸ್ತಾನ ತಂಡದ ಕಾಯಂ ನಾಯಕ ಬಾಬರ್ ಅಜಮ್ ಗಾಯದಿಂದ ಚೇತರಿಕೆ ಕಾಣದ ಕಾರಣ ಎರಡನೇ ಟೆಸ್ಟ್ನಿಂದಲೂ ಹೊರಗುಳಿಯಲಿದ್ದಾರೆ. ಕ್ರೈಸ್ಟ್ಚರ್ಚ್ನಲ್ಲಿ ನಡೆಯುವ ಈ ಪಂದ್ಯದಲ್ಲಿ ಬಾಬರ್ ಅನುಪಸ್ಥಿತಿಯಲ್ಲೂ ನಾವು ಉತ್ತಮ ಪ್ರದರ್ಶನ ತೋರಲಿದ್ದೇವೆ ಎಂದು ಹಂಗಾಮಿ ನಾಯಕ ರಿಜ್ವಾನ್ ತಿಳಿಸಿದ್ದಾರೆ.
ಮೊದಲ ಟೆಸ್ಟ್ ಮುಗಿದ ನಂತರ ಬಾಬರ್ ನೆಟ್ಸ್ನಲ್ಲಿ ಕೆಲವು ಸಮಯ ಅಭ್ಯಾಸ ನಡೆಸಿದ್ದರು. ಆದರೆ ನಾಳೆಯಿಂದ ಆರಂಭವಾಗುವ ಟೆಸ್ಟ್ನಲ್ಲಿ ಅವರು ಕಣಕ್ಕಿಳಿಯುತ್ತಿಲ್ಲ ಎಂದು ತಿಳಿದು ಬಂದಿದೆ.
ಬಾಬರ್ ಶೇ. 100ರಷ್ಟು ಫಿಟ್ ಇದ್ದಾರೆ ಎಂಬುದರ ಬಗ್ಗೆ ವಿಶ್ವಾಸವಿಲ್ಲ. ಅವರು ಸಂಪೂರ್ಣ ಫಿಟ್ನೆಸ್ ಪಡೆಯದೆ ಪಂದ್ಯವನ್ನಾಡುವ ಅವಕಾಶವನ್ನು ತೆಗೆದುಕೊಳ್ಳುವುದಿಲ್ಲ ಎಂಬುದು ನನಗೆ ಗೊತ್ತಿದೆ ಎಂದು ರಿಜ್ವಾನ್ ಹೇಳಿದ್ದಾರೆ.