ಕರಾಚಿ:ಪ್ರವಾಸಿ ಶ್ರೀಲಂಕಾದ ವಿರುದ್ಧ ಪಾಕಿಸ್ತಾನದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಗಾಗಿ ಬಾಬರ್ ಅಜಂಗೆ ಉಪನಾಯಕನ ಪಟ್ಟ ನೀಡಿದ್ದು, ಕ್ಯಾಪ್ಟನ್ ಆಗಿ ಸರ್ಫರಾಜ್ ಅಹ್ಮದ್ ಮುಂದುವರಿಯಲಿದ್ದಾರೆಂದು ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ತಂಡದ ಮುಖ್ಯ ಕೋಚ್ ಮಿಸ್ಬಾ ವುಲ್ ಹಕ್ ತಿಳಿಸಿದ್ದಾರೆ.
ಸೆಪ್ಟೆಂಬರ್ 27ರಿಂದ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಹಾಗೂ ಲೀಗ್ ಹಂತದಲ್ಲೇ ಹೊರಬಿದ್ದಿದ್ದಕ್ಕಾಗಿ ಸರ್ಫರಾಜ್ ಅಹ್ಮದ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಬೇರೆ ಆಟಗಾರನಿಗೆ ನಾಯಕತ್ವದ ಜವಾಬ್ದಾರಿ ನೀಡುವಂತೆ ಅಲ್ಲಿನ ಹಿರಿಯ ಕ್ರೀಡಾ ದಿಗ್ಗಜರು ಮನವಿ ಮಾಡಿದ್ದರು.
ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಪಿಸಿಬಿ ಅವರನ್ನೇ ಕ್ಯಾಪ್ಟನ್ ಆಗಿ ಮುಂದುವರಿಸಲು ತೀರ್ಮಾನ ಕೈಗೊಂಡಿದ್ದು, ಡೆಪ್ಯುಟಿ ಆಗಿ ಬಾಬರ್ ಅಜಂ ಆಯ್ಕೆಗೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಮಿಸ್ಬಾ, ನಾನು ಈಗಾಗಲೇ ಸರ್ಫರಾಜ್ ಜತೆ ಕ್ರಿಕೆಟ್ ಆಡಿರುವೆ. ಡ್ರೆಸ್ಸಿಂಗ್ ರೂಮ್ನಲ್ಲಿ ಯಾವ ರೀತಿಯ ಬದಲಾವಣೆ ತರಬೇಕು ಎಂಬುದು ನನಗೆ ಗೊತ್ತಿದೆ. ಸರ್ಫರಾಜ್ ಓರ್ವ ಹಿರಿಯ ಆಟಗಾರನಾಗಿರುವ ಕಾರಣ, ತಂಡದಲ್ಲಿ ಅವರ ಉಪಸ್ಥಿತಿ ತುಂಬ ಅವಶ್ಯ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 27ರಿಂದ ಆರಂಭಗೊಳ್ಳಬೇಕಿದ್ದ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲು ಶ್ರೀಲಂಕಾ ತಂಡದ ಕೆಲ ಪ್ಲೇಯರ್ಸ್ ನಿರಾಕರಣೆ ಮಾಡಿದ್ದರಿಂದ ಲಂಕಾ ಕ್ರಿಕೆಟ್ ಮಂಡಳಿ ಬೇರೆ ಪ್ಲೇಯರ್ಸ್ಗೆ ಅವಕಾಶ ನೀಡಿದ್ದು, ಲಾಹಿರು ತಿರುಮಣೆ ಏಕದಿನ ತಂಡ ಮುನ್ನಡೆಸಿದ್ರೆ, ಧನುಷ್ ಶಂಕರ್ ಟಿ20 ತಂಡ ಮುನ್ನಡೆಸಲಿದ್ದಾರೆ.