ಲಾಹೋರ್:ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಮತ್ತು ದೈಹಿಕ ಕಿರುಕುಳ ಆರೋಪ ಹೊರಿಸಿದ್ದಾರೆ.
ಪಾಕಿಸ್ತಾನದ ಮಾಧ್ಯಮ ಪ್ರಸಾರ ಮಾಡಿದ ಮಾಧ್ಯಮಗೋಷ್ಟಿಯಲ್ಲಿ, ಬಾಬರ್ ತನ್ನನ್ನು 10 ವರ್ಷಗಳ ಕಾಲ ಶೋಷಣೆ ಮಾಡಿದ್ದಾನೆ ಮತ್ತು ಮದುವೆಯಾಗುವುದಾಗಿ ಭರವಸೆ ನೀಡಿ, ಗರ್ಭಿಣಿ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ.
"ಬಾಬರ್ ಕ್ರಿಕೆಟಿಗನಲ್ಲದ ಸಮಯದಿಂದ ನಾವು ಸುದೀರ್ಘ ಸಂಬಂಧವನ್ನು ಹಂಚಿಕೊಳ್ಳುತ್ತಿದ್ದೇವೆ. ಅವರು ನನ್ನ ಶಾಲೆಯ ಸಹವರ್ತಿಯಾಗಿದ್ದಾರೆ. 2010 ರಲ್ಲಿ ನನಗೆ ಪ್ರಪೋಸ್ ಮಾಡಿದ್ರು, ನಾನು ಅದನ್ನು ಒಪ್ಪಿಕೊಂಡೆ" ಎಂದು ಮಹಿಳೆ ಹೇಳಿದ್ದಾರೆ.
"ಸಮಯ ಮುಂದುವರೆದಂತೆ, ನಾವು ಮದುವೆಯಾಗಲು ಯೋಜಿಸಿದ್ದೇವು. ಈ ಬಗ್ಗೆ ನಮ್ಮ ಕುಟುಂಬಗಳಿಗೆ ತಿಳಿಸಿದೆವು, ಆದರೆ ಅವರು ನಿರಾಕರಿಸಿದರು. ಆದ್ದರಿಂದ 2011ರಲ್ಲಿ ನಾವು ಮನೆ ಬಿಟ್ಟು ಓಡಿಹೋದೆವು. ನಾವು ನ್ಯಾಯಾಲಯದಲ್ಲಿ ಮದುವೆಯಾಗುತ್ತೇವೆ ಎಂದು ಅವರು ಹೇಳುತ್ತಲೇ ಇದ್ದರು. ಹಲವಾರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದೆವು. ಆದರೆ ಅವರು ಯಾವಾಗಲೂ ಮದುವೆ ಪ್ರಸ್ತಾಪವನ್ನು ತಪ್ಪಿಸುತ್ತಿದ್ದರು" ಎಂದು ಹೇಳಿದ್ದಾರೆ.
ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದಿದ್ದಾಗ ಮತ್ತು ಅದರ ನಂತರವೂ ಬಾಬರ್ ಅವರ ಖರ್ಚನ್ನು ಭರಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
"2014 ರಲ್ಲಿ, ಅವರು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ತಕ್ಷಣ, ಅವರ ನಡವಳಿಕೆಯು ಬದಲಾಗಲಾರಂಭಿಸಿತು. ಮುಂದಿನ ವರ್ಷ, ನಾನು ಅವರನ್ನು ಮದುವೆಯಾಗಲು ಕೇಳಿದ್ದಕ್ಕೆ ಅವರು ನಿರಾಕರಿಸಿದರು. 2016 ರಲ್ಲಿ ನಾನು ಗರ್ಭಿಣಿಯಾಗಿದ್ದೇನೆ ಎಂದು ಹೇಳಿದ್ದೆ, ಈ ವೇಳೆ ಅವರು ವಿಲಕ್ಷಣವಾಗಿ ವರ್ತಿಸಲು ಪ್ರಾರಂಭಿಸಿದರು ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಮನೆ ಬಿಟ್ಟು ಬಂದು ನಂಬಿಕೆಯನ್ನು ಕಳೆದುಕೊಂಡಿದ್ದರಿಂದ ನನ್ನ ಕುಟುಂಬದ ಬಳಿ ಹೋಗಲು ನನಗೆ ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ದೂರಿದ್ದಾರೆ.
"2017 ರಲ್ಲಿ ನಾನು ಬಾಬರ್ ವಿರುದ್ಧ ನಾಸಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಆತ ನನ್ನನ್ನು 10 ವರ್ಷಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ" ಎಂದು ಮಹಿಳೆ ಆರೋಪಿಸಿದ್ದಾಳೆ. ಮೂರೂ ಸ್ವರೂಪಗಳಲ್ಲಿ ಪಾಕ್ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿರುವ ಬಾಬರ್, ಪ್ರಸ್ತುತ ಪಾಕಿಸ್ತಾನದ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿದ್ದಾರೆ.