ಮೆಲ್ಬೋರ್ನ್:ವಿರಾಟ್ ಕೊಹ್ಲಿ ಮತ್ತು ತಂಡದ ವಿರುದ್ಧ ಸ್ಲೆಡ್ಜಿಂಗ್ನಿಂದ ದೂರ ಇರುತ್ತೇವೆ . ಏಕೆಂದರೆ ಈ ದ್ವಂದ್ವ ಯುದ್ದದಲ್ಲಿ ಭಾರತ ತಂಡ ಲಾಭಪಡೆದುಕೊಳ್ಳಲಿದೆ ಎಂದು ಆಸ್ಟ್ರೇಲಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ ಮಂಗಳವಾರ ಹೇಳಿದ್ದಾರೆ.
ಈ ಹಿಂದೆ ವೇಡ್ ಎದುರಾಳಿಗಳ ವಿರುದ್ಧ ಹಲವು ಬಾರಿ ತೀಕ್ಷ್ಣವಾದ ಪದಗಳನ್ನು ಬಳಸಿದ್ದಾರೆ. ಅದರಲ್ಲೂ 2017ರಲ್ಲಿ ಭಾರತದ ವಿರುದ್ಧ ಏಕದಿನ ಸರಣಿಯ ವೇಳೆ ಹಾಗೂ ಆ್ಯಶಸ್ ಸರಣಿಯಲ್ಲಿ ವೇಡ್ ಎದುರಾಳಿಗಳ ವಿರುದ್ಧ ವಾಕ್ಸಮರ ನಡೆಸಿದ್ದರು. ಆದರೆ, 32 ವರ್ಷದ ವೇಡ್ ಭಾರತೀಯ ಆಟಗಾರರೊಂದಿಗೆ ಮೌಖಿಕ ಮುಖಾಮುಖಿಯಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ. ಏಕೆಂದರೆ ಇದು ಪ್ರವಾಸಿಗರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಅವರೇ ಹೇಳಿದ್ದಾರೆ.
ಅದೊಂದು ಕಠಿಣ ತಂಡ , ಸ್ಲೆಡ್ಜಿಂಗ್ ಅನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾರೆ. ವಿರಾಟ್ ಪದಗಳ ಬಳಕೆ ಮತ್ತು ದೇಹ ಭಾಷೆಯನ್ನು ಬಳಸುವುದರಲ್ಲಿ ಬಹಳ ಬುದ್ದಿವಂತ, ಆದ್ದರಿಂದ ಭಾರತ ತಂಡದ ವಿರುದ್ಧ ಸ್ಲೆಡ್ಜಿಂಗ್ ಪ್ರಯೋಗ ಮಾಡಿದರೆ, ಅದು ಅವರಿಗೆ ಹೆಚ್ಚು ಪ್ರಯೋಜನವಾಗಲಿದೆ. ನಿಜ ಹೇಳಬೇಕೆಂದರೆ, ನಾನು ಅದರಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಬಯಸುವುದಿಲ್ಲ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 3 ರಿಂದ ಗಬ್ಬಾದಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಡಿ.11-15 ರವೆಗೆ ಅಡಿಲೇಡ್ನಲ್ಲಿ , ಮೂರನೇ ಟೆಸ್ಟ್ ಮೆಲ್ಬೋರ್ನ್ನಲ್ಲಿ, ಡಿಸೆಂಬರ್ 26ರಿಂದ 30ರವರೆಗೆ ನಾಲ್ಕನೇ ಟೆಸ್ಟ್ ಜನವರಿ 3ರಿಂದ 7ರವರೆಗೆ ನಡೆಯಲಿದೆ.