ಬ್ರಿಸ್ಬೇನ್: ಆಸ್ಟ್ರೇಲಿಯಾ ತಂಡದ ಉದಯೋನ್ಮುಖ ಬ್ಯಾಟ್ಸ್ಮನ್ ಮಾರ್ನಸ್ ಲಾಬುಶೇನ್ ಆಸ್ಟ್ರೇಲಿಯಾ ತಂಡದಲ್ಲಿ ಮೂರು ಮಾದರಿಯ ಕ್ರಿಕೆಟ್ನಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಟೆಸ್ಟ್ ಕ್ರಿಕೆಟ್ನಲ್ಲಿ ಲಾಬುಶೇನ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಕೂಡ ಆಗಿರುವ ಲಾಬುಶೇನ್ಗೆ ತಾವು ಮೂರು ಮಾದರಿಯ ಕ್ರಿಕೆಟಿಗ ಎನಿಸಿಕೊಳ್ಳುವ ಬಯಕೆಯಿದೆ. ಅದನ್ನು ಈಡೇರಿಸಿಕೊಳ್ಳುವುದೇ ನನ್ನ ಗುರಿ ಎಂದಿದ್ದಾರೆ.
ಸ್ಪೋರ್ಟ್ಸ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಆಟದ ಮಾದರಿ ಯಾವುದು ಎಂಬುಕ್ಕಿಂತ ನೀವು ಉತ್ತಮ ಪ್ರದರ್ಶನ ನೀಡಲು ಬಯಸಬೇಕು. ಏಕದಿನ ಕ್ರಿಕೆಟ್ನ ಕೆಲವೊಂದು ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಹೊಂದುತ್ತಿದ್ದೇನೆ. ಬೌಲಿಂಗ್ನಲ್ಲೂ ಸ್ಥಿರತೆ ಸಾಧಿಸಲು ಬಯಸುತ್ತಿದ್ದೇನೆ. ಪಂದ್ಯದ ಮಧ್ಯದಲ್ಲಿ ನಾಯಕನಿಗೆ ನಾನು ಉತ್ತಮ ಆಯ್ಕೆಯಾಗಿರುತ್ತೇನೆ. ಡೆತ್ ಓವರ್ಗಳಲ್ಲಿ ನನ್ನ ಬ್ಯಾಟಿಂಗ್ ಉತ್ತಮಗೊಳಿಸಿಕೊಳ್ಳುವುದರ ಕುರಿತು ಕೆಲಸ ಮಾಡುತ್ತಿದ್ದೇನೆ ಎಂದು ಲಾಬುಶೇನ್ ತಿಳಿಸಿದ್ದಾರೆ.