ಸೌತಾಂಪ್ಟನ್: ಆಸ್ಟ್ರೇಲಿಯಾ ತಂಡ ಎಂಎಸ್ ಧೋನಿಯಂತಹ ಮ್ಯಾಚ್ ಫಿನಿಷರ್ನನ್ನು ತಂಡದ ಬ್ಯಾಟಿಂಗ್ ಲೈನ್ಅಪ್ನಲ್ಲಿ ನೋಡಲು ಬಯಸಿದೆ ಎಂದು ಆಸೀಸ್ ತಂಡದ ಉಪನಾಯಕ ಪ್ಯಾಟ್ ಕಮ್ಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ಅದ್ಭುತ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ಇಂಗ್ಲೆಂಡ್ ವಿರುದ್ಧ 2 ರನ್ಗಳ ರೋಚಕ ಸೋಲುಕಂಡ ನಂತರ ಅವರು ಈ ಮಾತನ್ನು ಹೇಳಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 163 ರನ್ಗಳ ಮೊತ್ತವನ್ನು ಹಿಂಬಾಲಿಸಿತ್ತು. ಒಂದು ಹಂತದಲ್ಲಿ 124ಕ್ಕೆ 1 ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಾನದಲ್ಲಿತ್ತು. ಆದರೆ ಇಂಗ್ಲೆಂಡ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ ಆ ಮೊತ್ತಕ್ಕೆ 24 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಕೊನೆಗೆ 2 ರನ್ಗಳ ಸೋಲನುಭವಿಸಿತು.
"ತಂಡಕ್ಕೆ ಮಧ್ಯಮ ಕ್ರಮಾಂಕ ಬಲಿಷ್ಠವಾಗಿರಬೇಕು ಅದಕ್ಕಾಗಿ ಕೆಲವರನ್ನು ನಾವು ಗುರುತಿಸಿದ್ದೇವೆ. ಆ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಅಗತ್ಯವಿದೆ. ಎಂಎಸ್ ಧೋನಿ ವಿಶ್ವದ ಅತ್ಯುತ್ತಮ ಫಿನಿಷರ್ ಆಗಿದ್ದರು. ಏಕೆಂದರೆ ಅವರು 300ರಿಂದ 400 ಏಕದಿನ ಪಂದ್ಯಗಳನ್ನಾಡಿದ್ದರು. ಅದಕ್ಕಾಗಿ ಕಳೆದ ವಾರ ನಡೆದಿದ್ದ ಅಭ್ಯಾಸ ಪಂದ್ಯಗಳಲ್ಲಿ ನಾವು ಸಾಕಷ್ಟು ಹುಡುಗರಿಗೆ ಅವಕಾಶ ನೀಡಿದ್ದೆವು. ಧೋನಿಯಂತಹ ಆಟಗಾರನನ್ನು ಪಡೆಯುವುದಕ್ಕೆ ರಾತ್ರೋರಾತ್ರಿ ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ" ಎಂದು ಅವರು ಕ್ರೀಡಾ ವೆಬ್ಸೈಟ್ಗೆ ತಿಳಿಸಿದ್ದಾರೆ.
ಈ ಬಗ್ಗೆ ನಾಯಕ ಆ್ಯರೋನ್ ಫಿಂಚ್ ಹಾಗೂ ತಂಡದ ಆಯ್ಕೆ ಸಮಿತಿ ಚರ್ಚೆ ನಡೆಸುವುದು ಸಾಮಾನ್ಯ ವಿಷಯವಾಗಿದೆ. ನಾವು ಕೆಲವು ಆಟಗಾರರಿಗೆ ಅವರ ಜವಾಬ್ದಾರಿ ನೀಡಿ, ಅದರಲ್ಲಿ ಯಶಸ್ವಿಯಾಗಲು ದೀರ್ಘಾವಧಿಯ ಅವಕಾಶ ನೀಡಲು ಬಯಸಿದ್ದೇವೆ. ನನ್ನ ಪ್ರಕಾರ ಆಸ್ಟ್ರೇಲಿಯಾ ಅತ್ಯುತ್ತಮವಾದ ಆಟಗಾರರನ್ನು ಪಡೆದಿದೆ. ಆದರೆ ಅವರಿಗೆ ನೀಡಿರುವ ಜವಾಬ್ದಾರಿಯನ್ನು ಸಾಧಿಸಿ ತೋರಿಸಬೇಕಾದರೆ ಸಾಕಷ್ಟು ಪಂದ್ಯಗಳನ್ನು ಪ್ರತಿಯೊಬ್ಬರೂ ಆಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಸ್ತುತ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕ್ಯಾರಿಯಂತಹ ಆಟಗಾರರನ್ನು ಹೊಂದಿದ್ದು, ಫಿನಿಷರ್ ರೋಲ್ ಅನ್ನು ಯಾರು ನಿರ್ವಹಿಸಲಿದ್ದಾರೆ ಎಂದು ಕಾದು ನೋಡುತ್ತಿದೆ. ಕಳೆದ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 15 ರನ್ಗಳ ಅಗತ್ಯವಿತ್ತು. ಆದರೆ ಸ್ಟೋಯ್ನಿಸ್ 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರಾದರೂ ಗೇಮ್ ಫಿನಿಷ್ ಮಾಡುವಲ್ಲಿ ವಿಫಲರಾದರು.