ಸಿಡ್ನಿ:2019ರಲ್ಲಿ ಟೆಸ್ಟ್ ಕ್ರಿಕೆಟ್ನ ಗರಿಷ್ಠ ರನ್ ಸರದಾರನಾಗಿದ್ದ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ 2020ರಲ್ಲೂ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ್ದು, ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಮೊದಲ ದಿನ 133 ರನ್ ಸಿಡಿಸಿದ್ದ ಲಾಬುಶೇನ್ 2ನೇ ದಿನವೂ ಬ್ಯಾಟಿಂಗ್ ಮುಂದುವರಿಸಿ ತಮ್ಮ ಚೊಚ್ಚಲ ದ್ವಿಶತಕ(215) ಸಿಡಿಸುವ ಮೂಲಕ 2020ರಲ್ಲೂ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುರಿಸಿದ್ದಾರೆ.
2019ರಲ್ಲಿ 11 ಟೆಸ್ಟ್ ಪಂದ್ಯಗಳಿಂದ 1104 ರನ್ ಗಳಿಸಿದ್ದ ಮಾರ್ನಸ್ ಲಾಬುಶೇನ್ 3 ಶತಕ ಹಾಗೂ 7 ಅರ್ಧಶತಕ ಸಿಡಿಸಿದ್ದರು. ಇದೀಗ 2020ರ ಆರಂಭದ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. 363 ಎಸೆತಗಳನ್ನೆದುರಿಸಿದ ಅವರು 19 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 215 ರನ್ ಗಳಿಸಿ ಟಾಡ್ ಆ್ಯಸ್ಟೆಲ್ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದರು.
ಬ್ರಾಡ್ಮನ್ ಹಿಂದಿಕ್ಕಿದ ಲಾಬುಶೇನ್
ತವರಿನಲ್ಲಿ 5 ಪಂದ್ಯಗಳನ್ನಾಡಿರುವ ಲಾಬುಶೇನ್ 837 ರನ್ ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಸಮ್ಮರ್ನಲ್ಲಿ 5 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಮೂಲಕ ಕ್ರಿಕೆಟ್ ದೈತ್ಯ ಡಾನ್ ಬ್ರಾಡ್ಮನ್(810 ಮತ್ತು 806 )ರನ್ನು ಹಿಂದಿಕ್ಕಿದ್ದಾರೆ. ಇನ್ನು ವ್ಯಾಲಿ ಹಮ್ಮಂಡ್(905) ಮಾತ್ರ ಲಾಬುಶೇನ್ಗಿಂತ ಮುಂದಿದ್ದು, ಎರಡನೇ ಇನ್ನಿಂಗ್ಸ್ನಲ್ಲಿ ಇವರನ್ನೂ ಹಿಂದಿಕ್ಕುವ ಅವಕಾಶವಿದೆ.
ಲಾಬುಶೇನ್ ದ್ವಿಶತಕ ಬಲ ಹಾಗೂ ವಾರ್ನರ್ 45, ಸ್ಮಿತ್ 63, ಟಿಮ್ ಪೈನ್ 35 ರನ್ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ 454 ರನ್ ಗಳಿಸಿದೆ. ಕಿವೀಸ್ ಪರ ಗ್ರ್ಯಾಂಡ್ ಹೋಮ್ 3, ನೈಲ್ ವ್ಯಾಗ್ನರ್ 3, ಟಾಡ್ ಆ್ಯಸ್ಟೆಲ್ 2 ಹಾಗೂ ಸೋಮರ್ ವಿಲ್ಲೆ ಹಾಗೂ ಮ್ಯಾಟ್ ಹೆನ್ರಿ ತಲಾ ಒಂದು ವಿಕೆಟ್ ಪಡೆದರು.
ನ್ಯೂಜಿಲ್ಯಾಂಡ್ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, 29 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿದೆ.