ಮೆಲ್ಬೋರ್ನ್:"ಭಾರತದ ವಿರುದ್ಧ ಆಡುವಾಗ ಯಾವಾಗಲೂ ಸ್ವಲ್ಪ ಒತ್ತಡ ಇದ್ದೇ ಇರುತ್ತದೆ" ಎಂದು ಪ್ರತಿಪಾದಿಸಿರುವ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆತಿಥೇಯರ ಬ್ಯಾಟಿಂಗ್ ವೈಫಲ್ಯದಿಂದ ನನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದಿದ್ದಾರೆ.
ಭಾರತ ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಬ್ಯಾಟಿಂಗ್ ಸಮಸ್ಯೆ ಕಾಡುತ್ತಿದ್ದು, ಪ್ರಮುಖ ಆಟಗಾರರಾದ ಮಾರ್ನಸ್ ಲಾಬುಶೇನ್ ಮತ್ತು ಸ್ಟೀವ್ ಸ್ಮಿತ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಡೇವಿಡ್ ವಾರ್ನರ್ ಆಯ್ಕೆಯಾಗಿದ್ದು, ಆಸೀಸ್ ತಂಡದ ಬಲ ಹೆಚ್ಚಾಗಿದೆ.
ಈ ಬಗ್ಗೆ ಮಾತನಾಡಿರುವ ವಾರ್ನರ್ "ನನ್ನ ಮೇಲೆ ಯಾವುದೇ ಒತ್ತಡವಿದೆ ಎಂದು ನಾನು ಭಾವಿಸುವುದಿಲ್ಲ. 1-1 ರಲ್ಲಿ ಸರಣಿ ಸಮಬಲವಾಗಿದ್ದು, ಯಾವಾಗಲೂ ಒತ್ತಡವಿರುತ್ತದೆ. ಆದರೆ ನನ್ನ ಮೇಲೆ ಹೆಚ್ಚಿನ ಒತ್ತಡವಂತೂ ಇಲ್ಲ. ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ. ನಾನು ಸಾಧ್ಯವಾದಷ್ಟು ಉತ್ತಮವಾಗಿ ಆಡುವ ಪ್ರಯತ್ನದ ಆತ್ಮವಿಶ್ವಾಸದಿಂದ ಅಲ್ಲಿಗೆ ಹೋಗುತ್ತೇನೆ. ಪಂದ್ಯ ಗೆಲ್ಲಲು ತಂಡವು ಸಾಮೂಹಿಕ ಪ್ರಯತ್ನವನ್ನು ಮಾಡುತ್ತಿರುವಾಗ ನನ್ನ ಮೇಲೆ ಯಾವುದೇ ಒತ್ತಡ ಇರಲಾರದು" ಎಂದಿದ್ದಾರೆ.
ವಾರ್ನರ್ ಎರಡನೇ ಏಕದಿನ ಪಂದ್ಯದ ವೇಳೆ ತೊಡೆ ಸಂದು ಗಾಯಕ್ಕೊಳಗಾಗಿ ಕೊನೆಯ ಏಕದಿನ, ಟಿ20 ಸರಣಿ ಹಾಗೂ ಮೊದಲೆರಡು ಟೆಸ್ಟ್ ಪಂದ್ಯಗಳಿಂದಿ ಹೊರಗುಳಿದಿದ್ದರು. ಒಂದು ತಿಂಗಳಿನಿಂದ ಪುನಶ್ಚೇತನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯ ಎರಡು ಟೆಸ್ಟ್ ಪಂದ್ಯಕ್ಕಾಗಿ ತಂಡ ಸೇರಿಕೊಂಡಿದ್ದಾರೆ.