ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡ ಅತಿ ಹೆಚ್ಚು ಅಂಕ ಹೊಂದಿದ್ದರೂ ಐಸಿಸಿ ಬಿಡುಗಡೆ ಮಾಡಿರುವ ನೂತನ ನಿಯಮದನ್ವಯ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನಕ್ಕೇರಿದೆ.
ಕೋವಿಡ್-19 ಪರಿಣಾಮ ಕೆಲವು ಟೆಸ್ಟ್ ಪಂದ್ಯಗಳು ರದ್ದಾಗಿವೆ. ಹೀಗಾಗಿ ಗರಿಷ್ಠ ಅಂಕ ಪಡೆದಿರುವ ತಂಡದ ಬದಲು ಗರಿಷ್ಠ ಗೆಲುವಿನ ಸರಾಸರಿ ಹೊಂದಿರುವ ತಂಡಗಳು ಫೈನಲ್ ಪ್ರವೇಶಿಸಲಿವೆ ಎಂದು ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಐಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಸ್ತುತ ಐಸಿಸಿ ಬಿಡುಗಡೆ ಮಾಡಿರುವ ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ 296 ಅಂಕ ಹೊಂದಿದ್ದರೂ ಸರಣಿಯ ಗೆಲುವಿನ ಸರಾಸರಿಯಲ್ಲಿ ಶೇ. 82.2 ಪಡೆದು ಮೊದಲ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ 3 ಸರಣಿಯನ್ನಾಡಿದ್ದು 7 ಪಂದ್ಯಗಳಲ್ಲಿ ಗೆಲುವು ಹಾಗೂ 2 ಸೋಲು ಕಂಡಿದೆ. ಭಾರತ ತಂಡ 4 ಸರಣಿಯನ್ನಾಡಿದ್ದು, 7 ಗೆಲುವು ಹಾಗೂ 2 ಸೋಲು ಕಂಡಿದೆ. 360 ಅಂಕ ಹೊಂದಿದ್ದರೂ ಶೇ. 75ರಷ್ಟು ಗೆಲುವಿನ ಸರಾಸರಿ ಇರುವುದರಿಂದ 2ನೇ ಸ್ಥಾನಕ್ಕೆ ಕುಸಿದಿದೆ.
ಇಂಗ್ಲೆಂಡ್ 60.8 % (292), ನ್ಯೂಜಿಲ್ಯಾಂಡ್ 50% (180) ಸರಾಸರಿ ಹೊಂದಿದ್ದು 3 ಮತ್ತು 4ನೇ ಸ್ಥಾನದಲ್ಲಿದೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಸರಣಿಯು ಭಾರತ ತಂಡಕ್ಕೆ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಬೇಕಾದರೆ ನಿರ್ಣಾಯಕವಾಗಲಿದೆ.