ಮೆಲ್ಬೋರ್ನ್: ಒಂದೇ ಸಮಯದಲ್ಲಿ ಟೆಸ್ಟ್ ಸರಣಿ ಮತ್ತು ಟಿ-20 ಸರಣಿ ನಡೆಸಲು ಚಿಂತಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಉದ್ಧೇಶವನ್ನು ತಾವೂ ವಿರೋಧಿಸುವುದಾಗಿ ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಫೆಬ್ರವರಿ 22ರಿಂದ ಮಾರ್ಚ್ 7ರ ವರೆಗೆ ಆಸ್ಟ್ರೇಲಿಯಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಆಡಲಿದೆ. ಇದೇ ಸಮಯಕ್ಕೆ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನಾಡುವ ಬಗ್ಗೆ ಪ್ರಸ್ತಾವನೆಯಿದೆ. ಆದರೆ, ಈ ಆಲೋಚನೆಗೆ ತಮ್ಮ ವಿರೋಧವಿದೆ ಎಂದು ಲ್ಯಾಂಗರ್ ತಿಳಿಸಿದ್ದಾರೆ.
" ಕ್ರಿಕೆಟ್ ಆಸ್ಟ್ರೇಲಿಯಾದ ಸಿಎಒಗೆ ಈ ವಿಚಾರ ಸ್ಪಷ್ಟವಾಗಿ ಗೊತ್ತಿದೆ. ಆದರೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ, ನನಗಿದು ಖಂಡಿತಾ ಏಕಕಾಲದಲ್ಲಿ 2 ಸರಣಿಯನ್ನಾಡುವುದು ಇಷ್ಟವಿಲ್ಲ" ಎಂದು ಸ್ಥಳೀಯ ರೇಡಿಯೋ ಸ್ಟೇಷನ್ ಸೆನ್ ಜೊತೆ ಮಾತನಾಡಿದ ಲ್ಯಾಂಗರ್ ತಿಳಿಸಿದ್ದಾರೆ.
ಮಾತು ಮುಂದುವರಿಸಿ, " ಒಂದೇ ಜಾಗದಲ್ಲಿ ಎರಡೆರಡು ಆಸ್ಟ್ರೇಲಿಯಾ ತಂಡಗಳನ್ನು ನೋಡಲು ನಾನು ಎಂದಿಗೂ ಇಷ್ಟಪಡಲಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವರ್ಷದಲ್ಲಿ ಕೋವಿಡ್ 19 ನಿಂದ ಏನಾಗುತ್ತಿದೆ, ಅದರ ಸಂಕೀರ್ಣತೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನಮ್ಮದು ಒಂದೇ ದೇಶವಲ್ಲವೆ? ನಾವು ಎರಡು ದೇಶಗಳಲ್ಲ ಅಲ್ವ? ಲ್ಯಾಂಗರ್ ಪ್ರಶ್ನಿಸಿದ್ದಾರೆ.
ಒಂದೇ ಸಮಯದಲ್ಲಿ ಎರಡು ಅಂತಾರಾಷ್ಟ್ರೀಯ ಟೂರ್ನಿಗಳನ್ನಾಡಿದರೆ, ಎರಡು ಸರಣಿಯಲ್ಲಿನ ಮೌಲ್ಯ ಕುಸಿಯುತ್ತದೆ. ಜೊತೆಗೆ ಇದು ದೇಶಿ ಟೂರ್ನಮೆಂಟ್ ಆಗಿರುವ ಶೆಫೀಲ್ಡ್ ಶೀಲ್ಡ್ ಟೂರ್ನಿಗೂ ಹೊಡೆತ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.