ಮೆಲ್ಬೋರ್ನ್(ಆಸ್ಟ್ರೇಲಿಯಾ): ಸೆಮಿಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರ ತಂಡ ಕಿವೀಸ್ ವಿರುದ್ಧ 4 ರನ್ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಲೀಗ್ನಲ್ಲಿ ಆಡಿದ್ದ ಮೂರು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಒಂದು ಸೋಲುಕಂಡಿದ್ದ ಎರಡು ತಂಡಗಳಿಗೂ ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಕೊನೆಯವರೆಗೂ ರೋಚಕವಾಗಿದ್ದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರು 4 ರನ್ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಬೆತ್ ಮೂನಿ ಅವರ ಅರ್ಧಶತಕ(60)ದ ನೆರವಿನಿಂದ 155 ರನ್ ಕಲೆಹಾಕಿತು. ಮೂನಿಗೆ ಸಾಥ್ ನೀಡಿದ ಲ್ಯಾನಿಂಗ್ 21, ಗಾರ್ಡ್ನರ್ 20, ಪೆರ್ರಿ 21, ಹೇನಸ್ 19 ರನ್ ಗಳಿಸಿ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು.
ಅನ್ನಾ ಪೀಟರ್ಸನ್ 2 ವಿಕೆಟ್, ಅಮೇಲಿಯಾ ಕೆರ್ 22ಕ್ಕೆ1, ಹೇಲಿ ಜಾನ್ಸೆನ್ 26ಕ್ಕೆ1 ಹಾಗೂ ಕ್ಯಾಸ್ಪೆರಕ್ 29ಕ್ಕೆ 1 ವಿಕೆಟ್ ಪಡೆದರು.
156 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡ 20 ಓವರ್ಗಳಲ್ಲಿ 151 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಗಿ 4 ರನ್ಗಳ ಸೋಲುಕಂಡಿತು.
ನಾಯಕಿ ಸೂಫಿ ಡಿವೈನ್ 31, ಮ್ಯಾಡಿ ಗ್ರೀನ್ 28, ಸೂಜಿ ಬೇಟ್ಸ್ 14, ಕೇಟಿ ಮಾರ್ಟಿನ್ 37 ರನ್ ಬಾರಿಸಿ ಕೊನೆಯ ಓವರ್ ವರೆಗೂ ಗೆಲ್ಲಲು ಹರಸಾಹಸ ಪಟ್ಟರೂ 4 ರನ್ಗಳಿಂದ ಸೋಲುಕಂಡಿತು.
ವಿಶ್ವಕಪ್ನಲ್ಲಿ ಎರಡನೇ ಪಂದ್ಯವಾಡಿದ ಜಾರ್ಜಿಯಾ ವೇರ್‌ಹ್ಯಾಮ್ ಹಾಗೂ ಮೇಗನ್ ಶೂಟ್ ತಲಾ ಮೂರು ವಿಕೆಟ್ ಪಡೆದು ಕಿವೀಸ್ ಪಾಲಾಗುತ್ತಿದ್ದ ಗೆಲುವನ್ನು ಆಸ್ಟ್ರೇಲಿಯಾ ಕಡೆ ತಿರುಗಿಸಿದರು.
ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ 4ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು. ಈಗಾಗಲೇ ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.
ನಾಳಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವಿಂಡೀಸ್ ವಿರುದ್ಧ ಗೆದ್ದರೆ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಬೇಕಾಗುತ್ತದೆ. ದಕ್ಷಿಣ ಆಫ್ರಿಕಾ ವಿಂಡೀಸ್ ವಿರುದ್ಧ ಸೋತರೆ ಸೆಮಿಫೈನಲ್ ಆಯ್ಕೆಗೆ ರನ್ ರೇಟ್ ಲೆಕ್ಕಾಚಾರ ಮೊರೆ ಹೋಗಬೇಕಾಗುತ್ತದೆ.