ಸಿಡ್ನಿ: ಕೊಹ್ಲಿ ಆಕರ್ಷಕ ಅರ್ಧಶತಕದ ಹೊರೆತಾಗಿಯೂ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 12 ರನ್ಗಳ ಸೋಲು ಕಂಡಿದೆ. ಆದರೂ 2-1ರಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾ ನೀಡಿದ 187 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡ 20 ಓವರ್ಗಳಲ್ಲಿ 174 ರನ್ಗಳಿಸಲಷ್ಟೇ ಶಕ್ತವಾಗಿ 12 ರನ್ಗಳ ಸೋಲು ಕಂಡಿತು.
ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ (0) ಮೊದಲ ಓವರ್ನಲ್ಲೆ ಖಾತೆ ತೆರೆಯದೇ ಪೆವಿಲಿಯನ್ಸೇರಿಕೊಂಡರು. ಶಿಖರ್ ಧವನ್ ಮತ್ತು ಕೊಹ್ಲಿ 2ನೇ ವಿಕೆಟ್ಗೆ 74 ರನ್ಗಳ ಜೊತೆಯಾಟ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಸ್ವೆಪ್ಸನ್ ಬೇರ್ಪಡಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಧವನ್ 21 ಎಸೆತಗಳಲ್ಲಿ 28 ರನ್ಗಳಿಸಿದರು.
ಧವನ್ ಔಟಾಗುತ್ತಿದಂತೆ ಬಂದ ಸಂಜು ಸಾಮ್ಸನ್ 10 ರನ್ಗಳಿಸಿ ಔಟಾಗುವ ಮೂಲಕ ಸತತ 3ನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರೆ, ಶ್ರೇಯಸ್ ಅಯ್ಯರ್ ಮೊದಲ ಎಸೆತದಲ್ಲೇ ಸ್ವೆಪ್ಸನ್ಗೆ 3ನೇ ಬಲಿಯಾದರು.
5ನೇ ವಿಕೆಟ್ಗೆ ಪಾಂಡ್ಯ ಮತ್ತು ಕೊಹ್ಲಿ 44 ರನ್ಗಳಿಸಿ ಚೇತರಿಕೆ ನೀಡುವ ಭರವಸೆ ನೀಡಿದರಾದರೂ, 18ನೇ ಓವರ್ನಲ್ಲಿ ಜಂಪಾರ ಮೊದಲ ಎಸೆತದಲ್ಲಿ ಪಾಂಡ್ಯ ಔಟಾಗಿ ನಿರಾಶೆ ಅನುಭವಿಸಿದರು. 19ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಕೂಡ ದೊಡ್ಡ ಹೊಡೆತಕ್ಕೆ ಮುಂದಾಗಿ ಔಟಾಗುವ ಮೂಲಕ ಭಾರತದ ಗೆಲುವಿನ ಕನಸು ಕೂಡ ನುಚ್ಚುನೂರಾಯಿತು. ಪಾಂಡ್ಯ 13 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 20 ರನ್ಗಳಿಸಿದರೆ, ಕೊಹ್ಲಿ 61 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 85 ರನ್ಗಳಿಸಿ ಔಟಾದರು. ಶಾರ್ದುಲ್ ಠಾಕೂರ್ 7 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 17 ರನ್ಗಳಿಸಿ ಸೋಲಿನ ಅಂತರವನ್ನು ತಗ್ಗಿಸಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ವೆಪ್ಸನ್ 23 ರನ್ ನೀಡಿ 3 ವಿಕೆಟ್ ಪಡೆದರು ಗೆಲುವಿನ ರೂವಾರಿಯಾದರು. ಉಳಿದಂತೆ ಮ್ಯಾಕ್ಸ್ವೆಲ್ 20ಕ್ಕೆ 1, ಸೀನ್ ಅಬಾಟ್ 49ಕ್ಕೆ 1, ಟೈ 31ಕ್ಕೆ 1, ಜಂಪಾ 21ಕ್ಕೆ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಥ್ಯೂ ವೇಡ್ (80) ಹಾಗೂ ಮ್ಯಾಕ್ಸ್ವೆಲ್(54() ಅರ್ಧಶತಕ ಸಿಡಿಸಿ 186 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು.
ಕೊನೆಯ ಪಂದ್ಯದಲ್ಲಿ ಸೋತರು ಭಾರತ ತಂಡ 2-1ರಲ್ಲಿ ಟಿ20 ಸರಣಿ ಎತ್ತಿ ಹಿಡಿಯಿತು. ಮಿಚೆಲ್ ಸ್ವೆಪ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.