ಕ್ಯಾನ್ಬೆರಾ: ಭಾರತದ ವಿರುದ್ಧ ಏಕದಿನ ಸರಣಿ ಗೆಲ್ಲುತ್ತಿದ್ದಂತೆ ಆಸ್ಟ್ರೇಲಿಯಾ ಪುರುಷರ ತಂಡ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಲೀಗ್ನಲ್ಲಿ ಮೊದಲ ಸರಣಿಯನ್ನು ಸೋಲನುಭವಿಸಿರುವ ಭಾರತ 4ನೇ ಸ್ಥಾನದಲ್ಲಿದೆ.
ಭಾರತದ ವಿರುದ್ಧ ಆಸ್ಟ್ರೇಲಿಯಾ ಮೊದಲ ಪಂದ್ಯವನ್ನು 66 ರನ್ಗಳಿಂದ, 2ನೇ ಪಂದ್ಯವನ್ನು 51 ರನ್ಗಳಿಂದ ಮಣಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ 40 ಅಂಕ ಪಡೆದು +0.357 ನೆಟ್ ರನ್ರೇಟ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ತಂಡ 9 ಅಂಕ ಪಡೆದಿದ್ದು, -0.717 ನೆಟ್ರನ್ರೇಟ್ ಹೊಂದಿದೆ.
13 ತಂಡಗಳು ಭಾಗವಹಿಸುವ ಈ ಲೀಗ್ನಲ್ಲಿ ಆಸ್ಟ್ರೇಲಿಯಾ ತಂಡ ಈ ಮೊದಲು ಇಂಗ್ಲೆಂಡ್ ವಿರುದ್ಧ 2-1ರಲ್ಲಿ ಏಕದಿನ ಸರಣಿ ಜಯಿಸಿತ್ತು. ಐಸಿಸಿ 2023ಕ್ಕೆ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗಾಗಿ ಸೂಪರ್ ಲೀಗ್ ನಡೆಸುತ್ತಿದೆ. ಇದರಲ್ಲಿ ಮೊದಲ 7 ತಂಡಗಳು ಮತ್ತು ಟೂರ್ನಿಯನ್ನು ಆಯೋಜಿಸುವ ಭಾರತ ತಂಡ ನೇರ ಅರ್ಹತೆ ಪಡೆದುಕೊಂಡಿದೆ. ಉಳಿದ 5 ತಂಡಗಳು ಅರ್ಹತಾ ಪಂದ್ಯವನ್ನಾಡಿ ವಿಶ್ವಕಪ್ಗೆ ಪ್ರವೇಶ ಪಡೆಯಲಿವೆ.
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಐರ್ಲೆಂಡ್, ಅಫ್ಘಾನಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳು ಸೂಪರ್ ಲೀಗ್ನಲ್ಲಿ ಸೆಣಸಾಡಲಿವೆ. 2 ವರ್ಷಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಪ್ರತಿಯೊಂದು ತಂಡವೂ ತವರಿನಲ್ಲಿ 12 ಹಾಗೂ ವಿದೇಶದಲ್ಲಿ 12 ಪಂದ್ಯಗಳನ್ನಾಡಲಿವೆ.
ಬುಧವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 13 ರನ್ಗಳಿಂದ ಮಣಿಸಿತ್ತು. ಇಂದೇ ಮೊದಲ ಪಂದ್ಯವನ್ನಾಡಿದ ನಟರಾಜನ್ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದು ಮಿಂಚಿದ್ದರು.