ಸಿಡ್ನಿ :ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 66 ರನ್ಗಳಿಂದ ಸೋಲುಂಡು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾಕ್ಕೆ ಐಸಿಸಿ ದಂಡದ ಬರೆ ಎಳೆದಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ನಡೆಸಿದ್ದಕ್ಕಾಗಿ ಟೀಂ ಇಂಡಿಯಾ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ಹಾಕಲಾಗಿದೆ.
ಫೀಲ್ಡಿಂಗ್ ನಡೆಸುವ ತಂಡ ಇಂತಿಷ್ಟು ಅವಧಿಗೆ ಇಷ್ಟು ಓವರ್ ಮುಗಿಸಬೇಕು ಎಂಬ ನಿಯಮ ಇರುತ್ತದೆ. ಒಂದು ವೇಳೆ ಆ ನಿಯಮ ಮೀರಿದರೆ ಐಸಿಸಿ ದಂಡ ವಿಧಿಸುತ್ತದೆ.
ಕೊಹ್ಲಿ, ಅಪರಾಧಕ್ಕೆ ತಪ್ಪೊಪ್ಪಿಕೊಂಡಿದ್ದಾರೆ ಮತ್ತು ಪ್ರಸ್ತಾಪಿಸಲಾದ ಅನುಮೋದನೆಯನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ನಿಗದಿತ ಸಮಯಕ್ಕಿಂತ ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದೆ ಎನ್ನಲಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 10.15ಕ್ಕೆ ಪಂದ್ಯ ಮುಕ್ತಾಯವಾಗಬೇಕಿತ್ತು. ಆದರೆ, ರಾತ್ರಿ 11.10ಕ್ಕೆ ಅಂತಿಮ ಎಸೆತ ಎಸೆಯಲಾಗಿತ್ತು.