ಸಿಡ್ನಿ: ಬಾರ್ಡರ್ ಗವಾಸ್ಕರ್ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ಗೂ ಮುನ್ನ ಮಂಗಳವಾರ ಸಂಪೂರ್ಣ ಅವಧಿಯ ಅಭ್ಯಾಸ ನಡೆಸಿದೆ.
ಆಸ್ಟ್ರೇಲಿಯಾ ಮತ್ತು ಭಾರತ ತಂಡದ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ 1-1ರಲ್ಲಿ ಸಮಬಲದಲ್ಲಿದೆ. ಈ ಪಂದ್ಯ ಎರಡೂ ತಂಡಗಳಿಗೂ ಮಹತ್ವದ್ದಾಗಿದ್ದು, ಎರಡೂ ತಂಡಗಳೂ ಸರಣಿ ಮುನ್ನಡೆ ಸಾಧಿಸಲು ಹಾತೊರೆಯುತ್ತಿವೆ. ಕಳೆದ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿರುವ ಟೀಮ್ ಇಂಡಿಯಾ ಹೆಚ್ಚು ಆತ್ಮವಿಶ್ವಾದಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧ ಮುಂದಿನ ಪಂದ್ಯಗಳಿಗೂ ಮುನ್ನ ಭಾರತೀಯ ಆಟಗಾರರು ಅಭ್ಯಾಸ ಮಾಡುತ್ತಿರುವ ಕೆಲವು ಫೋಟೋಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ನಲ್ಲಿ ಪ್ರಕಟಿಸಿದೆ. ಈ ಪೋಟೋಗಳಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರಿಷಭ್ ಪಂತ್ ರನ್ನಿಂಗ್ ಮಾಡುತ್ತಿದ್ದರೆ, ಕಳೆದ ಪಂದ್ಯದ ಹೀರೋ ಸಿರಾಜ್ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ.
ಇನ್ನು ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ನೆಟ್ ಪ್ರಾಕ್ಟೀಸ್ ಮಾಡುವ ವೇಳೆ ಗಾಯಗೊಂಡು ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅವರಿಗೆ ಚೇತರಿಸಿಕೊಳ್ಳಲು 3 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ಮಂಗಳವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿ:ಟೀಮ್ ಇಂಡಿಯಾಗೆ ಮತ್ತೊಂದು ಶಾಕ್: ಟೆಸ್ಟ್ ಸರಣಿಯಿಂದ ಕೆ.ಎಲ್.ರಾಹುಲ್ ಔಟ್