ಕರ್ನಾಟಕ

karnataka

ETV Bharat / sports

ಭಾರತ ತಂಡಕ್ಕೆ ಮತ್ತೊಮ್ಮೆ ಅದೃಷ್ಟವಾದ ಎಂಸಿಜಿ: ಇಲ್ಲಿ ಟೀಂ ಇಂಡಿಯಾ ಗೆದ್ದ ಪಂದ್ಯಗಳೆಷ್ಟು?

ಭಾರತ ತಂಡ ಗೆದ್ದಿರುವ 8 ಪಂದ್ಯಗಳಲ್ಲಿ 4 ಎಂಸಿಜಿಯಲ್ಲಿ ಬಂದಿದ್ದರೆ, 2008ರಲ್ಲಿ ಪರ್ತ್​, 1978ರಲ್ಲಿ ಸಿಡ್ನಿ, ಅಡಿಲೇಡ್​ನಲ್ಲಿ 2003 ಮತ್ತು 2018ರಲ್ಲಿ ಗೆಲುವು ಸಾಧಿಸಿದೆ. ಆಸೀಸ್​ ನೆಲದಲ್ಲಿ ಅದೃಷ್ಟದ ಕ್ರೀಡಾಂಗಣವಾಗಿರುವ ಎಂಸಿಜೆಯಲ್ಲಿ ಗೆದ್ದ ಆ 4 ಐತಿಹಾಸಿಕ ಟೆಸ್ಟ್​ ಪಂದ್ಯಗಳ ವಿವರ ಇಲ್ಲಿದೆ.

ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​
ಕಪಿಲ್ ದೇವ್​- ರಹಾನೆ

By

Published : Dec 29, 2020, 5:12 PM IST

ಮೆಲ್ಬೋರ್ನ್​: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 8 ವಿಕೆಟ್​ಗಳ ಜಯ ಸಾಧಿಸಿದೆ. ಆಸೀಸ್​ ನೆಲದಲ್ಲಿ ಭಾರತ 50 ಪಂದ್ಯಗಳನ್ನಾಡಿದ್ದು, ಇದು ಕೇವಲ 8ನೇ ಗೆಲುವಾಗಿದೆ. ವಿಶೇಷವೆಂದರೆ 8ರಲ್ಲಿ ಅರ್ಧ ಅಂದರೆ 4 ಪಂದ್ಯಗಳನ್ನು ಭಾರತ ಇದೇ ಕ್ರೀಡಾಂಗಣದಲ್ಲಿ ಗೆದ್ದಿದೆ.

ಭಾರತ ತಂಡ ಗೆದ್ದಿರುವ 8 ಪಂದ್ಯಗಳಲ್ಲಿ 4 ಎಂಸಿಜಿಯಲ್ಲಿ ಬಂದಿದ್ದರೆ, 2008ರಲ್ಲಿ ಪರ್ತ್​, 1978ರಲ್ಲಿ ಸಿಡ್ನಿ, ಅಡಿಲೇಡ್​ನಲ್ಲಿ 2003 ಮತ್ತು 2018ರಲ್ಲಿ ಗೆಲುವು ಸಾಧಿಸಿದೆ. ಆಸೀಸ್​ ನೆಲದಲ್ಲಿ ಅದೃಷ್ಟದ ಕ್ರೀಡಾಂಗಣವಾಗಿರುವ ಎಂಸಿಜೆಯಲ್ಲಿ ಗೆದ್ದ ಆ 4 ಐತಿಹಾಸಿಕ ಟೆಸ್ಟ್​ ಪಂದ್ಯಗಳ ವಿವರ ಇಲ್ಲಿದೆ.

1978ರಲ್ಲಿ 222 ರನ್​ಗಳ ಜಯ

ಬಿಷನ್​ ಸಿಂಗ್​ ​ನೇತೃತ್ವದ ಭಾರತ ತಂಡ 1978ರ ಪ್ರವಾಸದಲ್ಲಿ ನಡೆದಿದ್ದ ಪಂದ್ಯದಲ್ಲಿ 222 ರನ್​ಗಳ ಜಯ ಸಾಧಿಸಿತ್ತು. ಇದು ಈ ಮೈದಾನದಲ್ಲಿ ಭಾರತೀಯರ ಮೊದಲ ಗೆಲುವಾಗಿತ್ತು. ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 256 ರನ್​ ಗಳಿಸಿದರೆ, ಆಸ್ಟ್ರೇಲಿಯಾ 213 ರನ್ ​ಗಳಿಸಿತ್ತು. ಮತ್ತೆ ಎರಡನೇ ಇನ್ನಿಂಗ್ಸ್​ನಲ್ಲಿ ಗವಾಸ್ಕರ್​ ಅವರ 118 ರನ್​ಗಳ ನೆರವಿನಿಂದ 343 ರನ್ ​ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ 387 ರನ್​ಗಳ ಟಾರ್ಗೆಟ್ ನೀಡಿತ್ತು. ಆಸ್ಟ್ರೇಲಿಯಾ ತಂಡ ಬಿ.ಚಂದ್ರಶೇಖರ್ ದಾಳಿಗೆ ಸಿಲುಕಿ ಕೇವಲ 164 ರನ್​ಗಳಿಗೆ ಆಲೌಟ್ ಆಗಿತ್ತು. ಅವರು ಎರಡು ಇನ್ನಿಂಗ್ಸ್​ನಲ್ಲೂ ತಲಾ 6 ವಿಕೆಟ್​ ಪಡೆದು ಗೆಲುವಿನ ರೂವಾರಿಯಾಗಿದ್ದರು.

1981ರಲ್ಲಿ 83 ರನ್​ಗಳ ಜಯ

ಬಿ.ಚಂದ್ರಶೇಖರ್​

ಕಪಿಲ್​ ದೇವ್​ ನೇತೃತ್ವದಲ್ಲಿ 1981ರಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ 143 ರನ್​ಗಳ ಸಣ್ಣ ಟಾರ್ಗೆಟ್​ ನೀಡಿಯೂ 59 ರನ್​ಗಳ ಜಯ ಸಾಧಿಸಿತ್ತು. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಜಿ.ವಿಶ್ವನಾಥ್​(114) ಶತಕದ ನೆರವಿನಿಂದ 237 ರನ್ ​ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 419 ರನ್ ​ಗಳಿಸಿತ್ತು. 182 ರನ್​ಗಳ ಇನ್ನಿಂಗ್ಸ್​ ಹಿನ್ನಡೆಯನುಭವಿಸಿ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ 324 ರನ್​ ಗಳಿಸಿ, ಆತಿಥೇಯರಿಗೆ 143 ರನ್ ಟಾರ್ಗೆಟ್ ನೀಡಿತು. ಆದರೆ ಕೇವಲ 28 ರನ್​ ನೀಡಿ 5 ವಿಕೆಟ್​ ಕಬಳಿಸಿದ ಕಪಿಲ್​ ದೇವ್​ ಆಸ್ಟ್ರೇಲಿಯಾ ತಂಡವನ್ನು 83 ರನ್​ಗಳಿಗೆ ಆಲೌಟ್ ಮಾಡಲು ನೆರವಾಗಿದ್ದರು.

2018ರಲ್ಲಿ 137 ರನ್​ಗಳ ಜಯ

ಜಸ್ಪ್ರೀತ್ ಬುಮ್ರಾ

ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ 2018ರ ಪ್ರವಾಸದಲ್ಲಿ ಆತಿಥೇಯರ ವಿರುದ್ಧ ಪ್ರಾಬಲ್ಯ ಸಾಧಿಸಿತ್ತು. ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಪೂಜಾರ(106) ಶತಕದ ನೆರವಿನಿಂದ 443 ರನ್ ​ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಬುಮ್ರಾ(6 ವಿಕೆಟ್​) ಮಾರಕ ದಾಳಿಗೆ ಕುಸಿದು ಕೇವಲ 151 ರನ್​ಗಳಿಗೆ ಆಲೌಟ್​ ಆಗಿತ್ತು. ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ 106 ರನ್ ​ಗಳಿಸುವಷ್ಟರಲ್ಲಿ 8 ವಿಕೆಟ್​ ಕಳೆದುಕೊಂಡಿದ್ದ ಸಮಯದಲ್ಲಿ ಡಿಕ್ಲೇರ್​ ಘೋಷಿಸಿಕೊಂಡಿತು. ಒಟ್ಟಾರೆ ಆಸ್ಟ್ರೇಲಿಯಾಗೆ 399 ರನ್​ಗಳ ಟಾರ್ಗೆಟ್​ ನೀಡಿತು. ಆದರೆ ಆಸ್ಟ್ರೇಲಿಯಾ ಭಾರತದ ದಾಳಿಗೆ ಕುಸಿದು 261 ರನ್​ಗಳಿಗೆ ಆಲೌಟ್ ಆಗಿ 137 ರನ್​ಗಳ ಸೋಲು ಕಂಡಿತು.

2020ರಲ್ಲಿ 8 ವಿಕೆಟ್​ಗಳ ಜಯ

ಅಜಿಂಕ್ಯ ರಹಾನೆ

ಕೊಹ್ಲಿ ಅನುಪಸ್ಥಿರಿಯಲ್ಲಿ ಬಾಕ್ಸಿಂಗ್​ ಡೇ ಟೆಸ್ಟ್​ ಆರಂಭಿಸಿದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 195 ರನ್​ಗಳಿಗೆ ಆಲೌಟ್ ಮಾಡಿತು. ನಂತರ ಮೊದಲ ಇನ್ನಿಂಗ್ಸ್​ನಲ್ಲಿ ರಹಾನೆ ಅವರ (112) ಶತಕದ ನೆರವಿನಿಂದ 326 ರನ್​ ಗಳಿಸಿತ್ತು. ಮತ್ತೆ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತೀಯ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿದ ಆಸೀಸ್​ 200 ರನ್​ಗಳಿಗೆ ಆಲೌಟ್ ಆಗುವ ಮೂಲಕ ರಹಾನೆ ಬಳಗಕ್ಕೆ 70 ರನ್​ಗಳ ಸಾಧಾರಣ ಗುರಿ ನೀಡಿತ್ತು. ಭಾರತ ಈ ಮೊತ್ತವನ್ನು 2 ವಿಕೆಟ್​ ಕಳೆದುಕೊಂಡು ತಲುಪುವ ಮೂಲಕ 8 ವಿಕೆಟ್​ಗಳ ಜಯ ಸಾಧಿಸಿ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿತು.

ಆಸ್ಟ್ರೇಲಿಯಾ ನೆಲದಲ್ಲಿ ಭಾರತ 50 ಟೆಸ್ಟ್​ ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದ್ದರೆ, ಆಸ್ಟ್ರೇಲಿಯಾ 24ರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಟೈ ಆಗಿದ್ದರೆ, 17 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ABOUT THE AUTHOR

...view details