ಸಿಡ್ನಿ:2 ಸೂಪರ್ ಓವರ್ಗಳ ಪಂದ್ಯಗಳ ಸಹಿತ ಸತತ 8 ಟಿ-20 ಪಂದ್ಯಗಳ ಗೆಲುವಿನ ವಿಶ್ವಾಸದಲ್ಲಿರುವ ಕೊಹ್ಲಿ ಪಡೆ ಇದೀಗ ತನ್ನ ಅಜೇಯ ಓಟದ ಜೊತೆಗೆ ಆಸೀಸ್ ವಿರುದ್ಧ ಟಿ-20 ಸರಣಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.
ಕ್ಯಾನ್ಬೆರಾದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ್ದ ಟೀಮ್ ಇಂಡಿಯಾ 11 ರನ್ಗಳ ಜಯ ಸಾಧಿಸಿದೆ. ರವೀಂದ್ರ ಜಡೇಜಾ ಮತ್ತು ಅವರ ಸಬ್ಸ್ಟಿಟ್ಯೂಟ್ ಚಹಾಲ್ ಅವರ ಅದ್ಭುತ ಪ್ರದರ್ಶನದ ಮೂಲಕ 3 ಪಂದ್ಯಗಳ ಟಿ-20 ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ. ಯಾರ್ಕರ್ ಕಿಂಗ್ ನಟರಾಜನ್ ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಬ್ಯಾಟಿಂಗ್ನಲ್ಲಿ ಕೆ.ಎಲ್.ರಾಹುಲ್ ಉತ್ತಮ ಲಯದಲ್ಲಿದ್ದಾರೆ. ತಮ್ಮ ಐಪಿಎಲ್ ಪ್ರದರ್ಶನವನ್ನು ಮುಂದುವರೆಸಿರುವುದು ಭಾರತ ತಂಡಕ್ಕೆ ರೋಹಿತ್ ಅನುಪಸ್ಥಿತಿಯನ್ನು ಕಾಡದಂತೆ ಮಾಡಿದೆ. ಆದರೆ ಆರಂಭಿಕ ಧವನ್ ಮತ್ತು ಕೊಹ್ಲಿ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದರು. ಈ ಪಂದ್ಯದಲ್ಲಿ ಅವರು ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಮನೀಶ್ ಪಾಂಡೆ ಹಾಗೂ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೂಡ ಸರಣಿ ಗೆಲುವಿಗಾಗಿ ಉತ್ತಮ ಪ್ರದರ್ಶನ ನೀಡಲು ಕಾಯುತ್ತಿದ್ದಾರೆ. ಇವರಿಬ್ಬರಿಗೆ ಈ ಪಂದ್ಯ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕೊನೆಯ ಅವಕಾಶವಾಗಿದೆ.
ಭಾರತ ಕಳೆದ 19 ತಿಂಗಳಿನಿಂದ ಟಿ-20 ಸರಣಿ ಸೋತಿಲ್ಲ. ಚುಟುಕು ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿ ಸತತ 8 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಾಬಲ್ಯ ಮೆರೆದಿದೆ.
ಮತ್ತೊಂದು ಕಡೆ ಟಿ-20 ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ಬಲಿಷ್ಠ ಬ್ಯಾಟ್ಸ್ಮನ್ಗಳನ್ನು ಹೊಂದಿರುವ ಭಾರತವನ್ನು ಮಣಿಸಿ ಸರಣಿಯನ್ನು ಸಮಬಲ ಸಾಧಿಸಲು ಎದುರು ನೋಡುತ್ತಿದೆ.
ಕಳೆದ ಪಂದ್ಯಗಳಲ್ಲಿ ಕೊನೆಯ ಓವರ್ಗಳಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟಿರುವ ಬೌಲಿಂಗ್ ವಿಭಾಗವನ್ನು ರಿಪೇರಿ ಮಾಡಿಕೊಳ್ಳಲು ಬಯಸಿದೆ. ಚೇಸಿಂಗ್ ಮಾಡುವ ವೇಳೆ ನಾವು ಹೆಚ್ಚು ಬೌಂಡರಿಗಳನ್ನು ಬಾರಿಸಲಿಲ್ಲ. ಜೊತೆಗೆ ಕೊನೆಯ ಓವರ್ಗಳಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟೆವು ಎಂದು ಫಿಂಚ್ ಶುಕ್ರವಾರದ ಪಂದ್ಯದ ನಂತರ ತಿಳಿಸಿದ್ದರು.
ಆದರೆ ಸ್ವತಃ ಮುಂದೆ ನಿಂತು ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಫಿಂಚ್ ಮೊದಲ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ. ಅವರ ಲಭ್ಯತೆಯ ಬಗ್ಗೆ ಇನ್ನು ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಒಂದು ವೇಳೆ ಅವರು ಸರಣಿಯಿಂದ ಹೊರಬಿದ್ದರೆ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ಆಸ್ಟ್ರೇಲಿಯಾ ಇದೇ ಮೈದಾನದಲ್ಲಿ ಭಾರತ ತಂಡವನ್ನು ಸತತ 2 ಏಕದಿನ ಪಂದ್ಯಗಳಲ್ಲಿ ಮಣಿಸಿರುವುದು ಒಂದು ಸಕಾರಾತ್ಮಕ ಅಂಶವಾಗಿದೆ.
ಅಗರ್ ಬದಲಿಗೆ ನಥನ್ ಲಿಯಾನ್ ಕಣಕ್ಕೆ
ಆಸ್ಟ್ರೇಲಿಯಾ ತಂಡ: ಆ್ಯರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್‌ವುಡ್, ಮೊಯಿಸಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಸ್ಟೋನಿಸ್, ಮ್ಯಾಥ್ಯೂ ವೇಡ್, ಡಾರ್ಸಿ ಶಾರ್ಟ್, ಆಡಮ್ ಜಂಪಾ, ನಥನ್ ಲಿಯಾನ್, ಸ್ವೆಪ್ಸನ್.
ಭಾರತದ ತಂಡ:ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್ (ವಿ.ಕೀ), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ಡಬ್ಲ್ಯೂಕೆ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಶಮಿ, ನವದೀಪ್ ಸೈನಿ, ದೀಪಕ್ ಚಹರ್, ಟಿ.ನಟರಾಜನ್, ಶಾರ್ದುಲ್ ಠಾಕೂರ್.