ಹೈದರಾಬಾದ್:ಎಂ.ಎಸ್.ಧೋನಿ ಅವರ ಜೀವನಚರಿತ್ರೆ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಕ್ರಿಕೆಟಿಗರ ಪ್ರೀತಿಗೆ ಪಾತ್ರರಾಗಿದ್ದರು. ಹೀಗಾಗಿ ಸುಶಾಂತ್ ಸಾವಿಗೆ ಕ್ರಿಕೆಟಿಗರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಸ್ಟ್ರೇಲಿಯಾ ತಂಡದ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್, ಸುಶಾಂತ್ ಬಗ್ಗೆ ಯೋಚಿಸದೆ ಇರಲು ಸಾಧ್ಯವಾಗುತ್ತಿಲ್ಲ. ಇದು ತುಂಬಾ ದುರಂತ. ಅನ್ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಅದು ಸುಶಾಂತ್ ಸಿಂಗ್ ಅಥವಾ ಧೋನಿನಾ ಎಂದು ಅನ್ನಿಸುತ್ತಿತ್ತು. ಅದೊಂದು ಅದ್ಭುತ ಚಿತ್ರ. ಅವರನ್ನ ಕಳೆದುಕೊಂಡು ಪ್ರಪಂಚ ಬಡವಾಗಿದೆ ಎಂದು ವಾಟ್ಸನ್ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಎಂ.ಎಸ್.ಧೋನಿ ಚಿತ್ರ ನಿರ್ಮಾಣದ ಸಮಯದಲ್ಲಿ ಸುಶಾಂತ್, ಭಾರತದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಮತ್ತು ಧೋನಿಯ ಬಾಲ್ಯದ ತರಬೇತುದಾರ ಕೇಶವ್ ಬ್ಯಾನರ್ಜಿ ಅವರೊಂದಿಗೆ ಅಧಿಕ ಸಮಯ ಕೆಲಸ ಮಾಡುತ್ತಿದ್ದರು. ಸುಶಾಂತ್ ನನ್ನ ಮಾರ್ಗದರ್ಶನದಲ್ಲಿ ‘ಹೆಲಿಕಾಪ್ಟರ್ ಶಾಟ್’ ಕಲಿಯುತ್ತಿದ್ದರು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಎಂ.ಎಸ್.ಧೋನಿ, ಅನ್ಟೋಲ್ಡ್ ಸ್ಟೋರಿ
ಅವನು ತುಂಬಾ ಸೌಮ್ಯ ಸ್ವಭಾವದ ಹುಡುಗ. ಆತನ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ರಾಂಚಿಗೆ ಬಂದಾಗ ನಾವು ಸುದೀರ್ಘವಾಗಿ ಮಾತನಾಡಿದ್ದೆವು. ದಯವಿಟ್ಟು ಹೆಲಿಕಾಪ್ಟರ್ ಶಾಟ್ ಹೇಗೆ ಬಾರಿಸಬೇಕೆಂದು ನನಗೆ ಕಲಿಸಿ ಎಂದು ಕೇಳುತ್ತಿದ್ದ ಎಂದಿದ್ದಾರೆ.
ಒಬ್ಬ ನಟ ಕ್ರಿಕೆಟಿಗನಾಗುವುದು ಅತ್ಯಂತ ಕಷ್ಟದ ವಿಷಯ. ಅದರಲ್ಲೂ ಎಂ.ಎಸ್.ಧೋನಿಯನ್ನ ಅನುಕರಿಸುವುದು ಕಠಿಣವಾಗಿತ್ತು. ಬಹಳಷ್ಟು ಬಯೋಪಿಕ್‌ಗಳು ಬಂದಿದ್ದವು. ಆದರೆ ಧೋನಿ ಸಿನಿಮಾದಂತೆ ಯಾವುದೂ ಯಶಸ್ವಿಯಾಗಲಿಲ್ಲ ಎಂದು ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಹೇಳಿದ್ದಾರೆ.