ನವದೆಹಲಿ:ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಏಷ್ಯಾಕಪ್ ರದ್ದುಗೊಂಡಿದೆ ಎಂದು ನಿನ್ನೆ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೇ ಟೂರ್ನಾಮೆಂಟ್ ಮುಂದಿನ ವರ್ಷ ಜೂನ್ವರೆಗೆ ಮುಂದೂಡಿಕೆಯಾಗಿದೆ ಎಂದು ಏಷ್ಯಾ ಕ್ರಿಕೆಟ್ ಸಮಿತಿ ಅಧಿಕೃತ ಮಾಹಿತಿ ಹೊರಹಾಕಿದೆ.
ಮುಂದಿನ ವರ್ಷ ಜೂನ್ವರೆಗೂ ಏಷ್ಯಾ ಕಪ್ ಮುಂದೂಡಿಕೆ! - ಏಷ್ಯಾಕಪ್ ಕ್ರಿಕೆಟ್ ಟೂರ್ನಿ
ಪ್ರಸಕ್ತ ವರ್ಷದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಜೂನ್ವರೆಗೂ ಮುಂದೂಡಿಕೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಎಎಸಿ ಟ್ವೀಟ್ ಮಾಡಿದೆ.
ಪ್ರಪಂಚದಾದ್ಯಂತ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಸೆಪ್ಟೆಂಬರ್ನಲ್ಲಿ ನಡೆಯಬೇಕಾಗಿರುವ ಟೂರ್ನಿ ಮುಂದೂಡಿಕೆಯಾಗಿದೆ ಎಂದು ಎಸಿಸಿ ತೀರ್ಮಾನ ಕೈಗೊಂಡಿದ್ದು, ಈ ಸಂಬಂಧ ಎಸಿಸಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದಿಂತೆ ಟ್ವೀಟ್ ಮಾಡಿರುವ ಮಂಡಳಿ, ಆಟಗಾರರು ಸೇರಿದಂತೆ ಎಲ್ಲರ ಸುರಕ್ಷತೆ ದೃಷ್ಠಿಯಿಂದ ಮುಂದಿನ ವರ್ಷದ ಜೂನ್ವರೆಗೆ ಟೂರ್ನಿ ನಡೆಸದಿರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಈ ಬಾರಿ ಪಾಕಿಸ್ತಾನ ಏಷ್ಯಾ ಕಪ್ ಅತಿಥ್ಯ ವಹಿಸಬೇಕಾಗಿತ್ತು. ಆದರೆ, ಭದ್ರತೆ ಕಾರಣ ಯುಎಇನಲ್ಲಿ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಇನ್ನು ಇದೇ ಕಾರಣಕ್ಕಾಗಿ ಸೆಪ್ಟೆಂಬರ್ನಲ್ಲಿ ನಡೆಸಬೇಕು ಎನ್ನಲಾಗಿರುವ ಐಪಿಎಲ್ ಹಾದಿ ಮತ್ತಷ್ಟು ಸುಗಮಗೊಂಡಿದೆ.