ನವದೆಹಲಿ: ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಾವುದೇ ಸ್ಪಿನ್ನರ್ ವಿರುದ್ಧ ಪೂಜಾರ ಪ್ರಾಬಲ್ಯ ಸಾಧಿಸಿದ್ರೆ ನಾನು ಅರ್ಧ ಮೀಸೆ ಬೋಳಿಸಿಕೊಂಡು ಆಡಲು ಸಿದ್ಧನಿದ್ಧೇನೆ ಎಂದು ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸವಾಲೆಸೆದಿದ್ದಾರೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರ ಜೊತೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ನಡೆಸಿದ ಸಂವಾದದ ವೇಳೆ ಅಶ್ವಿನ್, ಪೂಜಾರ ನನ್ನ ಸವಾಲನ್ನು ಪೂರ್ಣಗೊಳಿಸಿದ್ರೆ ನಾನು ಅರ್ಧ ಮೀಸೆ ತೆಗೆದು, ಮೈದಾನಕ್ಕೆ ಬಂದು ಆಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
"ಪೂಜಾರ ಆಫ್ ಸ್ಪಿನ್ನರ್ ವಿರುದ್ಧ ಓವರ್‌ದ ಟಾಪ್ ಹೊಡೆಯುವುದನ್ನು ನಾವು ಎಂದಾದ್ರೂ ನೋಡಲು ಸಾಧ್ಯವೆ? "ಎಂದು ವಿಕ್ರಮ್ ರಾಥೋರ್ಗೆ ಅಶ್ವಿನ್ ಪ್ರಶ್ನೆ ಕೇಳಿದರು.
"ಆ ಕೆಲಸ ಪ್ರಗತಿಯಲ್ಲಿದೆ, ಒಮ್ಮೆಯಾದ್ರೂ ನೀವು ಸ್ಪಿನ್ನರ್ ವಿರುದ್ಧ ಮೇಲುಗೈ ಸಾಧಿಸಬೇಕೆಂದು ನಾನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಅವರಿಗೆ ಮನವರಿಕೆಯಾಗುತ್ತಿಲ್ಲ. ಸ್ಪಿನ್ನರ್ ವಿರುದ್ಧ ಹೋಗದಿರುವುದಕ್ಕೆ ಅವರು ನನಗೆ ದೊಡ್ಡ ಕಾರಣಗಳನ್ನು ನೀಡುತ್ತಿದ್ದಾರೆ" ಎಂದು ರಾಥೋರ್ ಉತ್ತರಿಸಿದ್ದಾರೆ.
ನಾವು ಆಡಲು ಹೊರಟಿರುವ ಮುಂದಿನ ಇಂಗ್ಲೀಷ್ ಸರಣಿಯಲ್ಲಿ ಒಂದು ವೇಳೆ ಅವರು (ಪೂಜಾರ) ಮೊಯೀನ್ ಅಲಿ ಅಥವಾ ಯಾವುದೇ ಸ್ಪಿನ್ನರ್ಗಳ ವಿರುದ್ಧ ವಿಕೆಟ್ ಬಿಟ್ಟು ಮುಂದೆ ಬಂದು ಸಿಕ್ಸರ್ ಬಾರಿಸಿದ್ರೆ, ನಾನು ಅರ್ಧ ಮೀಸೆ ತೆಗೆಸಿ ಆಡಲು ಬರುತ್ತೇನೆ, ಇದು ನನ್ನ ಮುಕ್ತ ಸವಾಲು ಎಂದು ಅಶ್ವಿನ್ ತಮಾಷೆಯಾಗಿ ಹೇಳಿದ್ದಾರೆ.
ಇದೊಂದು ಅದ್ಭುತ ಸವಾಲು, ಅದನ್ನು ಅವರು ಹೇಗೆ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡೋಣ. ಆದರೆ, ಅವರು ಈ ಸವಾಲನ್ನು ಸ್ವೀಕರಿಸುತ್ತಾರೆ ಎಂದು ನಾನು ಭಾವಿಸಿಲ್ಲ ಎಂದು ರಾಥೋರ್ ತಿಳಿಸಿದ್ದಾರೆ.
ಕಳೆದ ಆಸೀಸ್ ಪ್ರವಾಸದಲ್ಲಿ ಆಸೀಸ್ ಸ್ಪಿನ್ನರ್ ವಿರುದ್ಧ ಚೇತೇಶ್ವರ್ ಪೂಜಾರ ಪ್ರಾಬಲ್ಯ ಸಾಧಿಸಿದ್ದರು. ಆದರೆ, ಈ ಪ್ರವಾಸದಲ್ಲಿ ಲಿಯಾನ್ ಎದುರಿಸಲು ಅವರು ತುಂಬಾ ತಾಪತ್ರಯ ಪಟ್ಟಿದ್ದರು. ಲಿಯಾನ್ ವಿರುದ್ಧ ಪ್ರತಿ ಎಸೆತವನ್ನು ಎದುರಿಸುವಾಗ ನನಗೆ ಹೃದಯಬಡಿತ ಹೆಚ್ಚಾಗುತ್ತಿತ್ತು.
ಇವರು ಆಡುವುದನ್ನು ನೋಡಿ ಬೇರೆ ಆಟಗಾರರು ಕೂಡ, ಆ ಬೌಲಿಂಗ್ ಎದುರಿಸುವುದು ಕಷ್ಟವೇನೋ ಎಂದು ಭಾವಿಸುತ್ತಿದ್ದರು. ಅದಕ್ಕಾಗಿ ತಾವೂ ಪೂಜಾರರನ್ನು ಸ್ಲೆಡ್ಜ್ ಮಾಡುತ್ತಿದ್ದೇನೆ ಎಂದು ಅಶ್ವಿನ್ ನಂತರ ರಾಥೋರ್ಗೆ ವಿವಿರಿಸಿದ್ದಾರೆ.
ಇದನ್ನು ಓದಿ:ಪಂತ್ ಅಥವಾ ನಾನು ಆಡುವ ಬಗ್ಗೆ ಮ್ಯಾನೇಜ್ಮೆಂಟ್ ನಿರ್ಧರಿಸಲಿದೆ: ವೃದ್ಧಿಮಾನ್ ಸಹಾ