ದುಬೈ: ಭಾರತದ ಮುಂಚೂಣಿ ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ ಐಸಿಸಿ ಮಂಗಳವಾರ ಪ್ರಕಟಿಸಿದ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್ ಟಮ್ಮಿ ಬ್ಯೂಮಂಟ್ ತಿಂಗಳ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಪಡೆದಿದ್ದಾರೆ.
ಅಶ್ವಿನ್ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ, ಮಹಿಳೆಯರಲ್ಲಿ ಇಂಗ್ಲೆಂಡ್ನ ಬ್ಯೂಮಂಟ್ ಆಯ್ಕೆ - ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ
2021ರ ಜನವರಿಯಿಂದ ಮೂರು ಮಾದರಿಯ ಕ್ರಿಕೆಟ್ನಲ್ಲಿ ಆ ತಿಂಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಪುರುಷ ಮತ್ತು ಮಹಿಳಾ ಕ್ರಿಕೆಟರ್ಗಳಿಗೆ ಐಸಿಸಿ ತಿಂಗಳ ಕ್ರಿಕೆಟರ್ ಪ್ರಶಸ್ತಿ ನೀಡುತ್ತಿದೆ.
ಅಶ್ವಿನ್ ಈ ಫೆಬ್ರವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ, 3-1ರಲ್ಲಿ ಭಾರತ ತಂಡ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಶ್ವಿನ್ ಈ ಸರಣಿಯಲ್ಲಿ 400 ವಿಕೆಟ್ ಮೈಲುಗಲ್ಲು ತಲುಪಿದ್ದರು. ಜೊತೆಗೆ ಚೆನ್ನೈನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಫೆಬ್ರವರಿಯಲ್ಲಿ 176 ರನ್ ಹಾಗೂ 24 ವಿಕೆಟ್ ಪಡೆದಿದ್ದರು. ಹಾಗಾಗಿ ಅವರಿಗೆ ಹೆಚ್ಚು ಅಭಿಮಾನಿಗಳು ತಮ್ಮ ಮತ ಹಾಕುವ ಮೂಲಕ ಜಯ ಪ್ರಶಸ್ತಿ ದೊರೆಯುವಂತೆ ಮಾಡಿದ್ದಾರೆ.
ಮಹಿಳಾ ಕ್ರಿಕೆಟರ್ ವಿಭಾಗದಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ್ತಿ ಟಮ್ಮಿ ಬ್ಯೂಮಂಟ್ ನ್ಯೂಜಿಲ್ಯಾಂಡ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿದ್ದರು. ಅವರು 231 ರನ್ಗಳಿಸುವ ಮೂಲಕ 2-1ರಲ್ಲಿ ಸರಣಿ ಗೆಲ್ಲಲು ನೆರವಾಗಿದ್ದರು. ಹಾಗಾಗಿ ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿ ಅವರಿಗೆ ಲಭಿಸಿದೆ.