ಕೋಲ್ಕತ್ತಾ:ಭಾರತ ತಂಡದ ವೇಗದ ಬೌಲರ್ ಅಶೋಕ್ ದಿಂಡಾ ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ಮೂಲತಃ ಪಶ್ಚಿಮ ಬಂಗಾಳದವರಾದ ಅಶೋಕ್ ದಿಂಡಾ ಭಾರತ ಪರ 13 ಏಕದಿನ ಮತ್ತು 9 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 12 ಮತ್ತು 17 ವಿಕೆಟ್ ಪಡೆದಿದ್ದಾರೆ. ವೆಸ್ಟ್ ಬೆಂಗಾಲ್ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದು, ಒಟ್ಟು 116 ಪಂದ್ಯಗಳಲ್ಲಿ 420 ವಿಕೆಟ್ ಕಬಳಿಸಿದ್ದಾರೆ. 98 ಲಿಸ್ಟ್ ಎ ಪಂದ್ಯಗಳಿಂದ 151 ವಿಕೆಟ್ ಪಡೆದಿದ್ದರು.
2005ರಿಂದ 2019ರವರೆಗೂ ಬೆಂಗಾಲ್ ತಂಡದ ಪರ ಆಡುತ್ತಿದ್ದ ದಿಂಡಾ ಕಳೆದ ವರ್ಷ ನಾಯಕ ಅಭಿಮನ್ಯು ಈಶ್ವರನ್ ಮತ್ತು ಕೋಚ್ ರಣದೇಬ್ ಬೋಸ್ ಜತೆ ಜಗಳವಾಡಿದ್ದರು. ಈ ಬೆಳವಣಿಗೆಯ ಬಳಿಕ ಕ್ಷಮೆ ಕೇಳಲು ಹಿಂದೇಟು ಹಾಕಿದ್ದರಿಂದ ಶಿಸ್ತು ಕ್ರಮ ಜರುಗಿಸಿ ಅವರನ್ನು ತಂಡದಿಂದ ಹೊರ ಹಾಕಲಾಗಿತ್ತು. ನಂತರ 2021ರ ದೇಶಿ ಆವೃತ್ತಿಯಲ್ಲಿ ಗೋವಾ ತಂಡದ ಆಡುತ್ತಿದ್ದರು.
" ಭಾರತಕ್ಕಾಗಿ ಆಡುವುದು ಪ್ರತಿಯೊಬ್ಬರ ಕನಸು, ನಾನು ಬೆಂಗಾಲ್ ಪರ ಆಡಿದ್ದರಿಂದ ಭಾರತ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಯಿತು. ಭಾರತ ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಬೆಂಗಾಲ್ಗೆ ಆಡುವಾಗ ಹಿರಿಯ ಆಟಗಾರರಾದ ರೋಹನ್ ಗವಾಸ್ಕರ್, ದೀಪ್ದಾಸ್ ಗುಪ್ತಾ ನನಗೆ ಸಾಕಷ್ಟು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದಾರೆ" ಎಂದು ದಿಂಡಾ ತಿಳಿಸಿದ್ದಾರೆ.
"ನಾನು ಸೌರವ್ ಗಂಗೂಲಿ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. 2005-06ರಲ್ಲಿ ಸೌರವ್ ಗಂಗೂಲಿ ನನ್ನನ್ನು ಬೆಂಗಾಲ್ 16 ಸದಸ್ಯರ ತಂಡಕ್ಕೆ ಆಯ್ಕೆ ಮಾಡಿಕೊಂಡರು. ನಾನು ಮಹಾರಾಷ್ಟ್ರದ ವಿರುದ್ಧ ಪದಾರ್ಪಣೆ ಮಾಡಿದ್ದೆ. ನಾನು ಯಾವಾಗಲೂ ದಾದಾಗೆ ಋಣಿಯಾಗಿರುತ್ತೇನೆ. ದಾದಾ ನನಗೆ ಸದಾ ಬೆಂಬಲ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
ಇದನ್ನು ಓದಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮೇಲೆ ಕಣ್ಣು.. ನೆಟ್ನಲ್ಲಿ ಬೆವರು ಹರಿಸ್ತಿರುವ ಭಾರತ-ಇಂಗ್ಲೆಂಡ್!