ಮುಂಬೈ:ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಬಿಹಾರ ಮತ್ತು ಅಸ್ಸೋಂನಲ್ಲಿ ಪ್ರವಾಹದಿಂದ ನೊಂದಿರುವ ಸಂತ್ರಸ್ತರಿಗೆ ನೆರವಾಗುವುದಾಗಿ ವಾಗ್ದಾನ ಮಾಡಿದ್ದಾರೆ.
ಅಸ್ಸೋಂನ 21 ಜಿಲ್ಲೆಯ ಸುಮಾರು 1,536 ಹಳ್ಳಿಗಳ 16 ಲಕ್ಷಕ್ಕೂ ಹೆಚ್ಚು ಜನ ಇನ್ನೂ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಿಂದಾಗಿ ರಾಜ್ಯದಲ್ಲಿ 100 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ತಿಳಿದು ಬಂದಿದೆ. ಬಿಹಾರದಲ್ಲಿ 20ಕ್ಕೂ ಹೆಚ್ಚು ಲಕ್ಷ ಮಂದಿ ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪ್ರವಾಸ ಸಂತ್ರಸ್ತರಿಗೆ ನೆರವಾಗುತ್ತಿರುವ 3 ಸಂಸ್ಥೆಗಳ ಕಾರ್ಯಕ್ಕೆ ಕೊಹ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
"ನಮ್ಮ ದೇಶ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದರೆ, ಅಸ್ಸೋಂ ಹಾಗೂ ಬಿಹಾರದಲ್ಲಿ ವಿನಾಶಕಾರಿ ಪ್ರವಾಹದಿಂದಾಗಿ ಹಲವರು ಬಲಿಯಾಗಿದ್ದಾರೆ. ಪ್ರವಾಹ ಅನೇಕರ ಜೀವನೋಪಾಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ." ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ನಾವು ಅಸ್ಸೋಂ ಮತ್ತು ಬಿಹಾರದ ಜನರಿಗಾಗಿ ಪ್ರಾರ್ಥಿಸುವುದನ್ನು ಮುಂದುವರಿಸುತ್ತಾ, ನಾನು ಹಾಗೂ ಅನುಷ್ಕಾ ಜನರ ಒಳಿತಿಗಾಗಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿರುವ ಮೂರು ಸಂಸ್ಥೆಗಳ ಮೂಲಕ ಜನರಿಗೆ ನೆರವಾಗುವ ವಾಗ್ದಾನ ಮಾಡಿದ್ದೇವೆ.
ನಿಮಗೂ ಕೂಡ ಸಂಕಷ್ಟಕ್ಕೊಳಗಾಗಿರುವ ಈ ರಾಜ್ಯಗಳಿಗೆ ನೆರವಾಗಬೇಕು ಎಂದು ಅನಿಸಿದರೆ, ಈ ಸಂಸ್ಥೆಗಳ ಮೂಲಕ ನೆರವಾಗಿ ಎಂದು ಕೊಹ್ಲಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕೂಡ ಅಸ್ಸೋಂ ಜನರ ಪರಿಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ್ದರು. ಮಾರ್ಚ್ನಲ್ಲಿ ಅಸ್ಸೋಂ ಪ್ರವಾಸ ಕೈಗೊಂಡಿದ್ದ ವೇಳೆ ಭೇಟಿಯಾದ ಅಲ್ಲಿನ ಜನರು ಭಯಾನಕ ಪ್ರವಾಹಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಅಲ್ಲಿ ಪ್ರವಾಹ ಜನರ ಜೀವನವನ್ನು ನಾಶಪಡಿಸುತ್ತಿದೆ, ದಯವಿಟ್ಟು ಸುರಕ್ಷಿತವಾಗಿರಿ, ಎಂದು ಟ್ವೀಟ್ ಮಾಡಿದ್ದರು.