ಮುಂಬೈ:ತಂಡದ ಮುಖ್ಯ ಕೋಚ್ ಆಗಿ ಧರ್ಮ ಆಧಾರಿತ ಆಯ್ಕೆಗೆ ಪ್ರಯತ್ನಿಸಿದ್ದರು ಎಂದು ಉತ್ತರಾಖಂಡ ಕ್ರಿಕೆಟ್ ಮಂಡಳಿಯ ಆರೋಪಕ್ಕೆ ಗುರಿಯಾಗಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಜಾಫರ್ ಬೆಂಬಲಕ್ಕೆ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ ನಿಂತಿದ್ದಾರೆ.
ಜಾಫರ್ ಬುಧವಾರ ಆಯ್ಕೆ ಸಮಿತಿ ಮತ್ತು ಕ್ರಿಕೆಟ್ ಬೋರ್ಡ್ ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ಉತ್ತಾರಖಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆದರೆ ಮುಸ್ಲೀಮ್ ಆಟಗಾರರಿಗೆ ಬೆಂಬಲ ಸೂಚಿಸಿ, ತಂಡದಲ್ಲಿ ಅವಕಾಶ ನೀಡಲು ಪ್ರಯತ್ನಿಸುತ್ತಿದ್ದರು ಎಂದು ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳ ಆರೋಪಿಸಿದ್ದರು. ಆದರೆ ಜಾಫರ್ ಈ ಆರೋಪವನ್ನು ತಳ್ಳಿ ಹಾಕಿದ್ದು, ಒಂದು ವೇಳೆ ತಾವೂ ಆ ರೀತಿ ಧರ್ಮಾಧಾರಿತ ತಂಡದ ಆಯ್ಕೆಗೆ ಒತ್ತು ನೀಡಿದ್ದರೆ, ಅವರೇ ನನ್ನನ್ನು ಹುದ್ದೆಯಿಂದ ಕಿತ್ತೊಗೆಯಬೇಕಿತ್ತಲ್ಲವೇ, ನಾನೇಕೆ ರಾಜೀನಾಮೆ ನೀಡುತ್ತಿದ್ದೆ" ಎಂದು ಮಾಧ್ಯಮದ ಮುಂದೆ ತಿಳಿಸಿದ್ದರು.
ಇದೀಗ ಕನ್ನಡಿಗ ಹಾಗೂ ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ತಮ್ಮ ಸಹ ಆಟಗಾರ ವಾಸೀಮ್ ಜಾಫರ್ ಬೆಂಬಲಕ್ಕೆ ನಿಂತಿದ್ದಾರೆ." ನಾನು ನಿಮ್ಮೊಂದಿಗೆ ಇದ್ದೇನೆ ವಾಸೀಮ್, ನೀವು ಸರಿಯಾದ ಕೆಲಸವನ್ನೇ ಮಾಡಿದ್ದೀರಿ. ನಿಮ್ಮ ಮಾರ್ಗದರ್ಶನವನ್ನು ತಪ್ಪಿಸಿಕೊಳ್ಳುವ ಆಟಗಾರರು, ದುರದೃಷ್ಟವಂತರು" ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಕೋಚ್ ಶಿಫಾರಸುಗಳನ್ನು ಸ್ವೀಕರಿಸದಿದ್ದರೆ ಆ ಸ್ಥಾನದಲ್ಲಿದ್ದು ಪ್ರಯೋಜನವೇನು: ಜಾಫರ್ ಪ್ರಶ್ನೆ