ಆಂಟಿಗುವಾ: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 260 ರನ್ಗಳ ಮುನ್ನಡೆ ಸಾಧಿಸಿದೆ.
ವೆಸ್ಟ್ ಇಂಡೀಸ್ ತಂಡದ ಮೇಲೆ ಸವಾರಿ ನಡೆಸಿದ ಟೀಂ ಇಂಡಿಯಾ ಬೌಲರ್ಗಳು, 222 ರನ್ಗಳಿಗೆ ಕೆರಿಬಿಯನ್ ತಂಡವನ್ನ ಕಟ್ಟಿ ಹಾಕಿದ್ದಾರೆ. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 75ರನ್ಗಳ ಮುನ್ನಡೆ ಪಡೆದುಕೊಂಡಿತ್ತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ರೋಸ್ಟನ್ ಚೇಸ್ ಆಘಾತ ನೀಡಿದ್ರು. ಕೇವಲ 16ರನ್ ಗಳಿಗೆ ಮಯಾಂಕ್ ಅಗರ್ವಾಲ್ ಎಲ್ಬಿ ಬಲೆಗೆ ಬಿದ್ದು ನಿರಾಸೆ ಅನುಭವಿಸಿದ್ರು. ಚೇತೇಶ್ವರ ಪುಜಾರ ಕೂಡ 25 ರನ್ಗಳಿಸಿ ಪೆವಿಲಿಯನ್ ಸೇರಿದ್ರು. 38 ರನ್ಗಳಿಸಿದ ಕನ್ನಡಿಗ ಕೆ.ಎಲ್ ರಾಹುಲ್ ರೋಸ್ಟನ್ ಚೇಸ್ ಎಸೆತದಲ್ಲಿ ಬೌಲ್ಡ್ ಆದ್ರು.
ಒಂದು ಹಂತದಲ್ಲಿ 81 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಆಸರೆಯಾದ್ರು. ಉಭಯ ಆಟಗಾರರು ಕೂಡ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ 72 ಓವರ್ಗಳಿಗೆ 3 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾ 260 ರನ್ಗಳ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ 96.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 297ರನ್ ಗಳಿಸಿತ್ತು.