ಸಿಡ್ನಿ:ಮೊದಲೆರಡು ಏಕದಿನ ಪಂದ್ಯಗಳಲ್ಲಿ ಸೋಲುಕಂಡ ಬಳಿಕ ಮುಂದಿನ ನಾಲ್ಕು ಪಂದ್ಯಗಳನ್ನು ಹೊಸ ಸರಣಿ ಎಂದು ಭಾವಿಸಿದ್ದರಿಂದ ಆಸ್ಟ್ರೇಲಿಯಾ ವಿರುದ್ಧ ತಿರುಗಿ ಬೀಳಲು ಸಾಧ್ಯವಾಯಿತು ಎಂದು ಟೀಮ್ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ತಿಳಿಸಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ 2 ಏಕದಿನ ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ನಿರಾಶೆಯನುಭವಿಸಿತ್ತು. ಆದರೆ ಕೊನೆಯ ಏಕದಿನ ಪಂದ್ಯ ಮತ್ತು ಟಿ20 ಸರಣಿಯನ್ನ 2-1ರಲ್ಲಿ ವಶಪಡಿಸಿಕೊಳ್ಳುವ ಮೂಲಕ ತಿರುಗಿ ಬಿದ್ದಿತ್ತು.
ಗಾಯಾಳು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ಉಪನಾಯಕ ಜವಾಬ್ದಾರಿ ವಹಿಸಿಕೊಂಡಿರುವ ರಾಹುಲ್,ಆಸ್ಟ್ರೇಲಿಯಾಕ್ಕೆ ಬಂದು ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡು ಮತ್ತೆ ಕಮ್ ಬ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಆದರೆ ಸತತ 2 ಸೋಲುಗಳ ನಂತರ ಮುಂದಿನ 4 ಪಂದ್ಯಗಳನ್ನು ಹೊಸ ಸರಣಿ ಎಂದು ನಾವೆಲ್ಲರು ಭಾವಿಸಿಕೊಳ್ಳಲು ನಿರ್ಧರಿಸಿದೆವು, ಅಲ್ಲದೆ ಎಲ್ಲಾ ಪಂದ್ಯಗಳನ್ನು ಗೆಲ್ಲಲು ನಿರ್ಧರಿಸಿದೆವು. ಇದರಿಂದ ಟಿ20 ಸರಣಿ ಜಯಿಸಲು ನೆರವಾಯಿತು ಎಂದು ತಿಳಿಸಿದ್ದಾರೆ.
ಅಲ್ಲದೆ ಈ ಸರಣಿಯಲ್ಲಿ ನಾವು ವೈಯಕ್ತಿಕವಾಗಿ ಮತ್ತು ತಂಡವಾಗಿ ಬಹಳಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಬಿಸಿಸಿಐ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.