ನವದೆಹಲಿ: ಕಾಶ್ಮೀರ ಹೊಂದಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದು ಮಾಡಿರುವ ವಿಚಾರಕ್ಕೆ ಪಾಕ್ನ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿ ಟ್ವೀಟ್ ಮೂಲಕ ಕಿಡಿಕಾರಿದ್ದು, ಇದೇ ಟ್ವೀಟ್ಗೆ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಕಾಶ್ಮೀರದಲ್ಲಿ ಅಪ್ರಚೋದಿತ ಆಕ್ರಮಣಶೀಲತೆ ನಡೆಯುತ್ತಿದೆ ಮತ್ತು ಮಾನವೀಯತೆ ಮೇಲೆ ಅಪರಾಧ ಎಸಗಲಾಗುತ್ತಿದೆ ಎನ್ನುವ ಅಫ್ರಿದಿ ಟ್ವೀಟ್ಗೆ ಗೌತಿ ಟಾಂಗ್ ನೀಡಿದ್ದು, ಮಾನವೀಯತೆ ಮೇಲಿನ ಅಪರಾಧ ಪಾಕ್ ಆಕ್ರಮಿತ ಕಾಶ್ಮೀರದಲ್ಲಾಗುತ್ತಿದೆ ಎಂದು ಹೇಳಲು ನೀವು ಮರೆತಿದ್ದೀರಾ ಎಂದಿದ್ದಾರೆ.
'ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ಅಗತ್ಯ': ಭಾರತದ ನಡೆ ಖಂಡಿಸಿ ಅಫ್ರಿದಿ ಟ್ವೀಟ್
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಿಂಸಾಚಾರಗಳು ನಡೆಯುತ್ತಿದೆ. ಆದರೆ ಚಿಂತಿಸಬೇಡಿ, ಸದ್ಯದಲ್ಲೇ ಎಲ್ಲವನ್ನೂ ಬಗೆಹರಿಸಲಾಗುತ್ತದೆ ಎಂದು ಗಂಭೀರ್ ವ್ಯಂಗ್ಯಪೂರಿತವಾಗಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದ ಪಾಕ್ ಮಾಜಿ ಆಲ್ರೌಂಡರ್, ವಿಶ್ವಸಂಸ್ಥೆಯ ಅಸ್ತಿತ್ವವನ್ನು ಪ್ರಶ್ನಿಸುವುದರ ಜೊತೆಗೆ ವಿಶ್ವಸಂಸ್ಥೆ ನೀಡಿರುವ ಗೊತ್ತುವಳಿಯ ಅನ್ವಯದಂತೆ ಕಾಶ್ಮೀರಿ ನಿವಾಸಿಗಳಿಗೆ ಅವರ ಹಕ್ಕು ನೀಡಬೇಕು ಎಂದು ಆಗ್ರಹಿಸಿದ್ದರು. ಕಾಶ್ಮೀರದಲ್ಲಿ ಮಾನವೀಯತೆ ವಿರುದ್ಧ ನಡೆದ ಅಪರಾಧವನ್ನು ಎಲ್ಲರೂ ಗಮನಿಸಬೇಕು. ಹಾಗಾಗಿ ವಿಶ್ವಸಂಸ್ಥೆ ನಿದ್ರಿಸುತ್ತಿದೆಯೇ ಎಂದಿದ್ದ ಅಫ್ರಿದಿ, ಅಮೆರಿಕ ಅಧ್ಯಕ್ಷರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿಯನ್ನೂ ಟ್ವೀಟ್ ಮುಖಾಂತರ ಮಾಡಿದ್ದರು.