ಮೆಲ್ಬೋರ್ನ್:ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ತಮ್ಮ 12ನೇ ಶತಕ ಬಾರಿಸಿದ ಅಜಿಂಕ್ಯ ರಹಾನೆಯನ್ನು ಟೀಮ್ ಇಂಡಿಯಾದ ಎಲ್ಲಾ ಮಾದರಿಯ ನಾಯಕ ವಿರಾಟ್ ಕೊಹ್ಲಿ 'ರಹಾನೆಯ ಅದ್ಭುತ ಆಟ' ಎಂದು ಕೊಂಡಾಡಿದ್ದಾರೆ.
ಅಜಿಂಕ್ಯ ರಹಾನೆ 200 ಎಸೆತಗಳಲ್ಲಿ 12 ಬೌಂಡರಿ ಸಹಿತ 104 ರನ್ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇವರು ಈಗಾಗಲೇ ರವೀಂದ್ರ ಜಡೇಜಾ ಅವರೊಂದಿಗೆ 104 ರನ್ಗಳ ಶತಕದ ಜೊತೆಯಾಟ ನಡೆಸಿದ್ದು, ಭಾರತಕ್ಕೆ 82 ರನ್ಗಳ ಮಹತ್ವದ ಮುನ್ನಡೆ ಒದಗಿಸಿಕೊಟ್ಟಿದ್ದಾರೆ. ಅಲ್ಲದೆ, 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿ ಮುನ್ನಡೆಯ ಅಂತರವನ್ನು ಹೆಚ್ಚಿಸಬಹುದೆಂಬ ನಿರೀಕ್ಷೆಯಲ್ಲಿ ಭಾರತೀಯ ಅಭಿಮಾನಿಗಳಿದ್ದಾರೆ.
ಒತ್ತಡದ ಸಂದರ್ಭದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರಿ ಶತಕ ಸಿಡಿಸಿದ ರಹಾನೆಯನ್ನು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.
ಕೊಹ್ಲಿ ಪತ್ನಿ ಜನವರಿಯ ಮೊದಲ ವಾರದಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವುದರಿಂದ ಈ ಸಂದರ್ಭದಲ್ಲಿ ತಮ್ಮ ಪತ್ನಿ ಜೊತೆಗಿರಲು ಅವರು ಬಿಸಿಸಿಐನಿಂದ ಪಿತೃತ್ವ ರಜೆ ಪಡೆದುಕೊಂಡಿದ್ದಾರೆ. ಹಾಗಾಗಿ ರಹಾನೆ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ರಹಾನೆ ನಾಯಕತ್ವನ್ನು ಈಗಾಗಲೇ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಮೆಕ್ಗ್ರಾತ್ ಸೇರಿದಂತೆ ಮಹಾನ್ ಕ್ರಿಕೆಟಿಗರು ಶ್ಲಾಘಿಸಿದ್ದಾರೆ.
ರಹಾನೆ, ಕೊಹ್ಲಿಯ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದು, ವಿಹಾರಿ ಜೊತೆಗೆ 52, ರಿಷಭ್ ಪಂತ್ ಜೊತೆಗೆ 57 ಹಾಗೂ ಜಡೇಜಾ ಜೊತೆಗೆ 104 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಸುಸ್ಥಿತಿಯಲ್ಲಿರಲು ನೆರವಾಗಿದ್ದಾರೆ.