ಮುಂಬೈ: 47ನೇ ಜನ್ಮದಿನದ ಸಂಭ್ರಮದಲ್ಲಿರುವ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ತಾಯಿಯ ಆಶೀರ್ವಾದ ಪಡೆದು ದಿನವನ್ನು ಪ್ರಾರಂಭಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿನ್, ನನ್ನ ತಾಯಿಯಿಂದ ಆಶೀರ್ವಾದ ತೆಗೆದುಕೊಳ್ಳುವ ಮೂಲಕ ನನ್ನ ದಿನವನ್ನು ಪ್ರಾರಂಭಿಸಿದೆ. ಇದೇ ವೇಳೆ, ಅಮ್ಮ ಗಣಪತಿಯ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟವನ್ನು ಮುನ್ನಡೆಸುತ್ತಿರುವ ಕೊರೊನಾ ವಾರಿಯರ್ಸ್ಗೆ ಗೌರವದ ಸಂಕೇತವಾಗಿ ಈ ವರ್ಷ ತಮ್ಮ ಜನ್ಮದಿನವನ್ನು ಆಚರಿಸುತ್ತಿಲ್ಲ. ಆದಾಗ್ಯೂ, ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಹಾಲಿ ಮಾಜಿ ಕ್ರಿಕೆಟಿಗರನ್ನು ಸೇರಿದಂತೆ ಹಲವು ತಾರೆಯರು ಶುಭಾಶಯವನ್ನು ತಿಳಿಸಿದ್ದಾರೆ.
ಹುಟ್ಟುಹಬ್ಬದ ಹಿಂದಿನ ದಿನ ಮಾತನಾಡಿದ್ದ ಸಚಿನ್, ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಲಾಕ್‌ಡೌನ್ ಘೋಷಣೆ ಮಾಡಲಾಗಿದ್ದು. ಜನರು ಮನೆಯೊಳಗೆ ಇರಬೇಕೆಂದು ಒತ್ತಾಯಿಸಿದ್ದರು. ಇಷ್ಟುದಿನ ನೀವು ನನಗೆ ಶುಭಾಶಯ ತಿಳಿಸಿದ್ದೀರಿ. ನನ್ನ ಪ್ರೀತಿಪಾತ್ರರಿಗೆ ನನ್ನ ಸಂದೇಶ ಎಂದರೆ, ನೀವು ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಬೇಕು ಎಂದಿದ್ದಾರೆ. ನಾನು ಬ್ಯಾಟಿಂಗ್ಗೆ ಇಳಿದಾಗಲೆಲ್ಲ ರನ್ ಗಳಿಸಬೇಕು, ಔಟ್ ಆಗಬಾರದು ಎಂದು ಜನ ಇಚ್ಛಿಸುತ್ತಿದ್ದರು. ನಾನು ಕೂಡ ನೀವೆಲ್ಲರೂ ಮನೆಯಲ್ಲೆ ಇದ್ದು ಸುರಕ್ಷಿತವಾಗಿರಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಕ್ರೀಸ್‌ನಲ್ಲಿ ಉಳಿಯಬೇಕೆಂದು ಅವರು ಬಯಸಿದಂತೆ, ಅವರು ಕ್ರೀಸ್‌ನಲ್ಲಿ ಉಳಿಯಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ಸಚಿನ್ ಈಗಾಗಲೇ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 25 ಲಕ್ಷ ರೂಪಾಯಿ ನೀಡಿದ್ದಾರೆ.