ಕೇಪ್ಟೌನ್: ಎಬಿಡಿ ವಿಲಿಯರ್ಸ್ ನಿವೃತ್ತಿಯಿಂದ ಹೊರಬರಲಿದ್ದಾರೆ ಎಂಬ ಊಹಾಪೋಹಗಳು ಕಳೆದ ಒಂದು ವರ್ಷದಿಂದ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಮಾಜಿ ನಾಯಕ ಡು ಪ್ಲೆಸಿಸ್ ಕೂಡ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದೇ ರೀತಿ ನೂತನ ಕೋಚ್ ಆಗಿರುವ ಮಾರ್ಕ್ ಬೌಷರ್ ಕೂಡ ವಿಲಿಯರ್ಸ್ ಸೇರಿದಂತೆ ಕೆಲವು ಹಿರಿಯ ಆಟಗಾರರ ಜೊತೆಗೆ ತಾವೂ ನಿವೃತ್ತಿಯಿಂದ ಹೊರಬರುವಂತೆ ಮಾತನಾಡಲಿದ್ದೇನೆ ಎಂದಿದ್ದರು. ಇದೀಗ ಎಬಿಡಿ ತಂಡಕ್ಕೆ ಮರಳಲು ಸಿದ್ದರಿದ್ದರೆಂದು ಹಾಲಿ ಸೀಮಿತ ಓವರ್ಗಳ ನಾಯಕ ಕ್ವಿಂಟನ್ ಡಿ ಕಾಕ್ ಹೇಳಿದ್ದಾರೆ.
ಕೋವಿಡ್ 19 ಕಾರಣ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದೂಡಲಾಗಿದೆ. ಆದರೆ ಈ ವಿಶ್ವಕಪ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಎಬಿ ಡಿ ವಿಲಿಯರ್ಸ್ ಮರಳಲು ಸಿದ್ದರಿದ್ದರು ಎಂದು ಬಹಿರಂಗ ಪಡಿಸಿದ್ದಾರೆ.
"ಎಬಿಡಿ ಈ ವರ್ಷ ಟಿ20 ವಿಶ್ವಕಪ್ ನಡೆದಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುತ್ತಿದ್ದರು. ಅವರು ಈಗಲೂ ಫಿಟ್ ಆಗಿದ್ದಾರೆ. ಅವರು ತಂಡಕ್ಕೆ ಸೇರಿಕೊಳ್ಳುವುದನ್ನು ನಾನು ಕೂಡ ಎದುರು ನೋಡುತ್ತಿದ್ದೇನೆ. ತಂಡದಲ್ಲಿ ಆಡುವ ಅವರ ಬಯಕೆಯನ್ನು ಕೈಬಿಡದಂತೆ ಅವರಲ್ಲಿ ಕೇಳಿಕೊಂಡಿದ್ದೇವೆ" ಎಂದು ಡಿಕಾಕ್ ತಿಳಿಸಿದ್ದಾರೆ.
ಎಬಿಡಿ ಅಂತಹ ಆಟಗಾರರನ್ನು ನಾನಷ್ಟೇ ಅಲ್ಲ, ಯಾವುದೇ ತಂಡವಾದರೂ ತಮ್ಮ ತಂಡದಲ್ಲಿ ಆಡಿಸಲು ಇಷ್ಟಪಡುತ್ತದೆ. ನಾನೂ ಕೂಡ ಅವರನ್ನು ನಮ್ಮ ತಂಡದಲ್ಲಿ ಆಡಿಸಲು ಇಷ್ಟಪಡುತ್ತೇನೆ. ನಾವು ಇದೀಗ ವಿಶ್ವಕಪ್ ಯಾವಾಗ ಆಯೋಜನೆಯಾಗುತ್ತದೆ ಎಂಬುದರ ಕಡೆಗೆ ಗಮನ ನೀಡುತ್ತಿದ್ದೇವೆ ಎಂದಿದ್ದಾರೆ.
ಎಬಿಡಿ 2018ರಲ್ಲಿ ವಿಪರೀತವಾದ ಕೆಲಸದ ಒತ್ತಡದಿಂದ ಬೇಸತ್ತು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಂಡು 2019 ವಿಶ್ವಕಪ್ ವೇಳೆ ತಂಡಕ್ಕೆ ಮರಳುವ ಇಚ್ಚೆ ವ್ಯಕ್ತಪಡಿಸಿದ್ದರು, ಆದರೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಂಡಳಿ ಅದಕ್ಕೆ ಒಪ್ಪಿರಲಿಲ್ಲ.