ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ದದ ಮೊದಲ ಟಿ-20 ಪಂದ್ಯದಲ್ಲಿ 32 ಎಸೆತಗಳಲ್ಲಿ 48 ರನ್ ಸಿಡಿಸಿದ್ದ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ನಾಯಕ ಆ್ಯರೋನ್ ಫಿಂಚ್ ಚುಟುಕು ಕ್ರಿಕೆಟ್ನಲ್ಲಿ ವೇಗವಾಗಿ 2000 ರನ್ ಪೂರೈಸಿದ 2ನೇ ಕ್ರಿಕೆಟಿಗ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ನೀಡಿದ 163 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ಗಳಿಸಲಷ್ಟೇ ಶಕ್ತವಾಗಿ 2 ರನ್‌ಗಳ ವಿರೋಚಿತ ಸೋಲು ಕಂಡಿದೆ. ಆದರೆ ರನ್ ಚೇಸಿಂಗ್ ವೇಳೆ ಆ್ಯರೋನ್ ಫಿಂಚ್ ಟಿ-20 ಕ್ರಿಕೆಟ್ನಲ್ಲಿ 2000 ರನ್ ಪೂರೈಸಿದ್ದರು. ಭಾರತದ ವಿರಾಟ್ ಕೊಹ್ಲಿ ನಂತರ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
ಫಿಂಚ್ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ 2,000 ರನ್‌ಗಳ ಸಾಧನೆಯನ್ನು ಮಾಡಲು 62 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಕೇವಲ 56 ಇನ್ನಿಂಗ್ಸ್‌ಗಳಲ್ಲಿ 2,000ರನ್ ಪೂರೈಸಿದ್ದಾರೆ. ಫಿಂಚ್ ಟಿ-20 ಕ್ರಿಕೆಟ್ನಲ್ಲಿ 2 ಸಾವಿರ ರನ್ ಪೂರೈಸಿರುವ ಆಸೀಸ್ನ 2ನೇ ಬ್ಯಾಟ್ಸ್ಮನ್ ಆಗಿದ್ದಾರೆ. ಡೇವಿಡ್ ವಾರ್ನರ್( 2265) ಈಗಾಗಲೇ ಈ ಸಾಧನೆ ಮಾಡಿದ್ದಾರೆ.
ಒಟ್ಟಾರೆ ಟಿ-20 ಕ್ರಿಕೆಟ್ನಲ್ಲಿ ಭಾರತದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ 2,794 ಹಾಗೂ 2,773 ರನ್ಗಳಿಸಿ ಅತಿ ಹೆಚ್ಚು ರನ್ಗಳಿಸಿದ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ನಂತರದಲ್ಲಿ ನ್ಯೂಜಿಲ್ಯಾಂಡ್ನ ಮಾರ್ಟಿನ್ ಗಪ್ಟಿಲ್(2,536), ಶೋಯೆಬ್ ಮಲಿಕ್(2,322), ಆಸೀಸ್ನ ಡೇವಿಡ್ ವಾರ್ನರ್(2,207), ಇಂಗ್ಲೆಂಡ್ನ ಇಯಾನ್ ಮಾರ್ಗನ್(2,152), ನ್ಯೂಜಿಲ್ಯಾಂಡ್ನ ಬ್ರೆಂಡನ್ ಮೆಕಲಮ್(2,140), ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್(2,124)ಪಾಕಿಸ್ತಾನದ ಮೊಹಮ್ಮದ್ ಹಫೀಜ್(2,147) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ಗಳೆನಿಸಿಕೊಂಡಿದ್ದಾರೆ.