ಅಹಮದಾಬಾದ್: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್ನ ಅಹಮದಾಬಾದ್ ಮೊಟೆರೊ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ಮೂಲಕ ಏಳು ವರ್ಷದ ನಂತರ ಈ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವುದಕ್ಕೆ ಚಾಲನೆ ಸಿಗಲಿದೆ.
ಹಳೆಯ ಮೊಟೆರೊ ಕ್ರೀಡಾಂಗಣ ನೆಲಸಮ ಮಾಡಿದ ಬಳಿಕ ಇದೀಗ ವಿಶ್ವ ದರ್ಜೆಯ ಮೈದಾನ ನಿರ್ಮಾಣ ಮಾಡಲಾಗಿದ್ದು, ಬರೋಬ್ಬರಿ 1,10,000 ಜನರು ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. ಫೆ. 24ರಿಂದ ಈ ಮೈದಾನದಲ್ಲಿ ಹೊನಲು ಬೆಳಕಿನ ಪಿಂಕ್ ಬಾಲ್ ಪಂದ್ಯ ನಡೆಯಲಿದ್ದು, ಅದಕ್ಕಾಗಿ ಅಹಮದಾಬಾದ್ನಲ್ಲಿರುವ ಉಭಯ ತಂಡ ಅಭ್ಯಾಸದಲ್ಲಿ ಭಾಗಿಯಾಗಿವೆ.
ಓದಿ: 'ನಮಗೆ ಬೇಕಾದುದನ್ನ ಪಡೆದುಕೊಂಡಿದ್ದೇವೆ': ಆರ್ಸಿಬಿ ಹೊಸ ಟೀಂ ಬಗ್ಗೆ ವಿರಾಟ್ ಮಾತು..!
2015ರಲ್ಲಿ ಬಂದ್ ಆಗಿದ್ದ ಈ ಮೈದಾನದಲ್ಲಿ 2014ರಲ್ಲಿ ಕೊನೆಯದಾಗಿ ಪಂದ್ಯ ನಡೆದಿತ್ತು. ಇದೀಗ ಟೀಂ ಇಂಡಿಯಾ ಹಾರ್ದಿಕ್ ಪಂಡ್ಯಾ, ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸೇರಿದಂತೆ ಅನೇಕರು ಕ್ರೀಡಾಂಗಣದ ಚಿತ್ರಣ ಶೇರ್ ಮಾಡಿಕೊಂಡಿದ್ದಾರೆ. ಅದ್ಭುತವಾಗಿ ಮೈದಾನ ನಿರ್ಮಾಣ ಮಾಡಲಾಗಿದ್ದು, ವಿಶ್ವ ದರ್ಜೆಯ ಸೌಲಭ್ಯ ಒದಗಿಸಲಾಗಿದೆ.
ಫೆಬ್ರವರಿ 24ರಂದು ಮೊಟೆರಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ಫೆಬ್ರವರಿ 23ರಂದು ಕ್ರೀಡಾಂಗಣವನ್ನು ಅಧಿಕೃತವಾಗಿ ಮೋದಿ ಉದ್ಘಾಟಿಸಲಿದ್ದಾರೆ.
ಒಟ್ಟು 800 ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ವಿಶ್ವ ದರ್ಜೆಯ ಕ್ರೀಡಾಂಗಣದ ನಿರ್ಮಾಣ ಕಾರ್ಯವನ್ನು 2017ರ ಜನವರಿಯಲ್ಲಿ ಅಹಮದಾಬಾದ್‌ನ ಸಬರಮತಿ ಪ್ರದೇಶದಲ್ಲಿ ಆರಂಭಿಸಲಾಯಿತು. 1,00,000ಕ್ಕೂ ಹೆಚ್ಚು ಜನ ಕುಳಿತುಕೊಳ್ಳುವ ಸಾಮರ್ಥ್ಯವಿರುವ ಕ್ರೀಡಾಂಗಣ ಇದಾಗಿದೆ. ಇದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣಕ್ಕಿಂತ ದೊಡ್ಡದಿದೆ.