ನವದೆಹಲಿ: ಐಪಿಎಲ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಕ್ಷಮೆ ಕೋರಿದ್ದು, ನನ್ನ ಹೇಳಿಕೆಯಲ್ಲಿ ವಿಶ್ವದ ಅತಿದೊಡ್ಡ ಪ್ರಾಂಚೈಸಿಯನ್ನು ಅವಮಾನಿಸುವ ಅಥವಾ ಕೀಳಾಗಿ ಬಿಂಬಿಸುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.
37 ವರ್ಷದ ವೇಗಿ ಡೇಲ್ ಸ್ಟೇನ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉತ್ತಮ ಗುಣಮಟ್ಟದ ಕ್ರಿಕೆಟ್ ಮರೆಯಾಗುತ್ತಿದೆ. ಅಲ್ಲಿ ಕ್ರಿಕೆಟ್ಗಿಂತ ದುಡ್ಡಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ ಎಂದು ಹೇಳಿದ್ದರು. ಅಲ್ಲದೆ ಪಾಕಿಸ್ತಾನ ಸೂಪರ್ ಲೀಗ್ ಮತ್ತು ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಕ್ರಿಕೆಟ್ಗೆ ಮಹತ್ವವಿದೆ ಎಂದು ಹೇಳುವ ಮೂಲಕ ದೊಡ್ಡ ವಿವಾದ ಸೃಷ್ಟಿಸಿದ್ದರು. ಇದರಿಂದ ಕೆರಳಿದ್ದ ಭಾರತೀಯ ಅಭಿಮಾನಿಗಳು ಸ್ಟೇನ್ ವಿರುದ್ಧ ಕಿಡಿಕಾರಿದ್ದರು.
"ಐಪಿಎಲ್ ನನ್ನ ವೃತ್ತಿಜೀವನದಲ್ಲಿ ಅದ್ಭುತವಾದದ್ದೇನೂ ಅಲ್ಲ, ಇತರೆ ಆಟಗಾರರಿಗೂ ಕೂಡ. ಆದರೆ ನನ್ನ ಮಾತುಗಳು ಯಾವುದೇ ಲೀಗ್‌ಗಳನ್ನು ಅವಮಾನಿಸುವ, ಕೀಳಾಗಿ ಬಿಂಬಿಸುವ ಅಥವಾ ಹೋಲಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ಮಾತುಗಳನ್ನು ಸಂದರ್ಭದ ಹೊರಗೆ ಬಿಂಬಿಸಲಾಗಿದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ" ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಜನವರಿಯಲ್ಲಿ ಸ್ಟೇನ್ 2021ರ ಐಪಿಎಲ್ನಿಂದ ಹೊರಗುಳಿಯುವುದಾಗಿ ತಿಳಿಸಿದ್ದರು. ಕಳೆದ ವರ್ಷ ಆರ್ಸಿಬಿಯಲ್ಲಿ ಆಡಿದ್ದ ಅವರನ್ನು ಮಿನಿ ಹರಾಜಿಗೂ ಮುನ್ನ ಆರ್ಸಿಬಿ ತಂಡದಿಂದ ಕೈಬಿಟ್ಟಿತ್ತು.
ಐಪಿಎಲ್ನಲ್ಲಿ 95 ಪಂದ್ಯಗಳನ್ನಾಡಿರುವ ಡೇಲ್ ಸ್ಟೇನ್ 97 ವಿಕೆಟ್ ಪಡೆದಿದ್ದಾರೆ. 8 ರನ್ಗಳಿಗೆ 3 ವಿಕೆಟ್ ಪಡೆದಿರುವುದು ಅವರ ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ.