ನವದೆಹಲಿ :ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಸಾಧನೆ ಮಾಡಿರುವ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ರನ್ನು ಲೆಜೆಂಡ್ ಎಂದು ಕರೆದಿದ್ದಾರೆ.
ಮ್ಯಾಂಚೆಸ್ಟರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಕೊನೆಯ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಕ್ರೈಗ್ ಬ್ರಾತ್ವೇಟ್ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರ್ಣಗೊಳಿಸಿದ ವಿಶ್ವದ 7ನೇ ಬೌಲರ್ ಎಂಬ ಶ್ರೇಯಕ್ಕೆ ಸ್ಟುವರ್ಟ್ ಬ್ರಾಡ್ ಪಾತ್ರರಾದರು. ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ರನ್ನು ಅಭಿಮಾನಿಗಳು 6 ಬಾಲಿಗೆ 6 ಸಿಕ್ಸರ್ ಹೊಡೆಸಿಕೊಂಡಿರುವುದನ್ನು ನೆನಪು ಮಾಡಿ ತಮಾಷೆ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.
"ನಾನು ಸ್ಟುವರ್ಟ್ ಬ್ರಾಡ್ ಬಗ್ಗೆ ಏನಾದರೂ ಬರೆಯುವಾಗಲೆಲ್ಲಾ ಜನರು 6 ಸಿಕ್ಸರ್‌ಗಳಿಗೆ ಹೊಡೆಸಿಕೊಂಡದ್ದರ ಬಗ್ಗೆ ಮಾತನಾಡುತ್ತಾರೆ. ಆದರೆ, ಇಂದು ಬ್ರಾಡ್ ಮಾಡಿರುವ ಸಾಧನೆಯನ್ನು ಶ್ಲಾಘಿಸಬೇಕೆಂದು ನಾನು ನನ್ನ ಎಲ್ಲಾ ಅಭಿಮಾನಿಗಳನ್ನು ಕೇಳಿಕೊಳ್ಳುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆಯುವುದು ತಮಾಷೆಯಲ್ಲ. ಇದು ಸಾಕಷ್ಟು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಬ್ರಾಡಿ ನೀವು ಲೆಜೆಂಡ್ " ಎಂದು ಯುವರಾಜ್ ಸಿಂಗ್ ಬರೆದುಕೊಂಡಿದ್ದಾರೆ.
2007ರ ಟಿ20 ವಿಶ್ವಕಪ್ ವೇಳೆ ಡರ್ಬನ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಎಸೆದಿದ್ದ ಒವರ್ನ ಎಲ್ಲಾ ಎಸೆತಗಳನ್ನು ಯುವರಾಜ್ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 6 ಬಾಲಿಗೆ 6 ಸಿಕ್ಸರ್ ಸಿಡಿಸಿದ ವಿಶ್ವದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.