ಕ್ರೈಸ್ಟ್ಚರ್ಚ್:ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಎರಡನೇ ಪಂದ್ಯದಲ್ಲಿ ಕಿವೀಸ್ ಪಡೆಗೆ ತಿರುಗೇಟು ನೀಡುವ ಇರಾದೆಯಲ್ಲಿದ್ದ ಕೊಹ್ಲಿ ಪಡೆ ಮತ್ತೊಮ್ಮೆ ಹೀನಾಯ ಸೋಲು ಕಂಡಿದೆ. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ವೈಟ್ವಾಶ್ ಮುಖಭಂಗಕ್ಕೊಳಗಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಪೃಥ್ವಿ ಶಾ 54ರನ್, ಚೇತೇಶ್ವರ್ ಪೂಜಾರಾ 54 ಹಾಗೂ ಹನುಮ್ ವಿಹಾರಿ 55ರನ್ಗಳ ನೆರವಿನಿಂದ 242ರನ್ಗಳಿಕೆ ಮಾಡ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ್ದ ಕಿವೀಸ್ ಪಡೆ 235ರನ್ಗಳಿಗೆ ಆಲೌಟ್ ಆಗುವ ಮೂಲಕ 7ರನ್ಗಳ ಹಿನ್ನಡೆ ಅನುಭವಿಸಿತು.
ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಕೇವಲ 124ರನ್ಗಳಿಗೆ ಆಲೌಟ್ ಆಗುವ ಮೂಲಕ ಎದುರಾಳಿ ತಂಡಕ್ಕೆ 132ರನ್ಗಳ ಗೆಲುವಿನ ಟಾರ್ಗೆಟ್ ನೀಡಿತು. ಇದರ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್ ಪಡೆ 36 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿ ಗೆಲುವಿನ ನಗೆ ಬೀರಿದೆ.
ಟಿ-20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲ್ಯಾಂಡ್ ತಂಡಕ್ಕೆ ಶಾಕ್ ನೀಡಿದ್ದ ಟೀಂ ಇಂಡಿಯಾ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಾಣುವ ಮೂಲಕ ಕಿವೀಸ್ ಪ್ರವಾಸ ಮುಗಿಸಿದೆ. ನ್ಯೂಜಿಲ್ಯಾಂಡ್ ತಂಡದ ಪರ ಥಿಮ್ ಸೌಥಿ, ಬೌಲ್ಟ್ ಹಾಗೂ ಜೇಮಿಸನ್ ಬೌಲಿಂಗ್ನಲ್ಲಿ ಮಿಂಚಿ ಎದುರಾಳಿ ತಂಡಕ್ಕೆ ಮಾರಕವಾಗಿ ಕಾಡಿದರು.