ಕ್ರೈಸ್ಟ್ಚರ್ಚ್: ಹೇಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ಎರಡನೇ ದಿನದಾಂತ್ಯಕ್ಕೆ ಪ್ರಮುಖ 6 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ.
7 ರನ್ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆಟಗಾರರು ಮತ್ತೆ ಕಳಪೆ ಫಾರ್ಮ್ ಮುಂದುವರೆಸಿದ್ದು, ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿ ಪೆವಿಲಿಯನ್ ಹಾದಿ ಹಿಡಿದರು. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 3 ರನ್ಗಳಿಸಿ ಬೌಲ್ಟ್ಗೆ ವಿಕೆಟ್ ಒಪ್ಪಿಸಿದ್ರೆ, ಪೃಥ್ವಿ ಶಾ 14 ರನ್ ಗಳಿಸಿ ಸೌಥಿ ಬೌಲಿಂಗ್ನಲ್ಲಿ ಲಾಥಮ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
ಇತ್ತ ನಾಯಕ ವಿರಾಟ್ ಕೊಹ್ಲಿ ಕೂಡ ರನ್ ಗಳಿಸಿಲು ಪರದಾಡಿದ್ರು. 30 ಎಸೆತಗಳಲ್ಲಿ 14 ರನ್ ಗಳಿಸಿ ಗ್ರಾಂಡ್ಹೋಮ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ನಾಯಕನ ನಿರ್ಗಮನದ ನಂತರ ಬಂದ ಉಪನಾಯಕ ಅಜಿಂಕ್ಯಾ ರಹಾನೆ 9 ರನ್ ಗಳಿಸಿ ಡಗೌಟ್ ಸೇರಿದ್ರು.
ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಬಂದ ವೇಗಿ ಉಮೇಶ್ ಯಾದವ್ ಕೇವಲ ಒಂದುರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 90 ರನ್ಗಳಿಸಿದ್ದು, 97 ರನ್ಗಳ ಮುನ್ನಡೆ ಸಾಧಿಸಿದೆ.
ಹನುಮ ವಿಹಾರಿ 5 ಮತ್ತು ಪಂತ್ 1 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಉತ್ತಮ ಬೌಲಿಂಗ್ ನಡೆಸಿದ ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದ್ರೆ, ಸೌಥಿ, ಗ್ರಾಂಡ್ಹೋಮ್, ವಾಗ್ನರ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಮೊದಲ ದಿನದಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿದ್ದ ಕಿವೀಸ್ಗೆ ಇಂದು ಬ್ಯಾಟಿಂಗ್ ಆರಂಭಿಸಿದಾಗ ಉಮೇಶ್ ಯಾದವ್ ಶಾಕ್ ಟ್ರೀಟ್‌ಮೆಂಟ್ ಕೊಟ್ರು. ಟಾಮ್ ಬಂಡಲ್ 30 ರನ್ಗಳಿಸಿ ಎಲ್ಬಿ ಬಲೆಗೆ ಬಿದ್ದರು. ನಂತರ ಬಂದ ನಾಯಕ ಕೇನ್ ವಿಲಿಯಮ್ಸನ್ ಬುಮ್ರಾ ಬೌಲಿಂಗ್ನಲ್ಲಿ ಪಂತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
ಆರಂಭಿಕ ಆಟಗಾರ ಟಾಮ್ ಲಾಥಮ್(52) ಅರ್ಧಶತಕ ಗಳಿಸಿ ಶಮಿ ಬೌಲಿಂಗ್ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡ್ರು. ರಾಸ್ ಟೇಲರ್(15), ನಿಕೋಲ್ಸ್(14), ಬಿಜೆ ವಾಲ್ಟಿಂಗ್(0), ಸೌಥಿ(0) ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು.
ಈ ವೇಳೆ ಜೊತೆಯಾದ ಗ್ರ್ಯಾಂಡ್ಹೋಮ್ ಕೆಲ ಕಾಲ ಟೀಂ ಇಂಡಿಯಾ ಬೌಲರ್ಗಳನ್ನು ಕಾಡಿ ಔಟ್ ಆದ್ರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೆಮಿಸನ್ 49 ಮತ್ತು ವಾಗ್ನರ್ 21 ರನ್ ಗಳಿಸಿ ಕಡಿಮೆ ರನ್ಗಳಿಗೆ ಕುಸಿತ ಕಾಣುತಿದ್ದ ಕಿವೀಸ್ಗೆ ಕೊಂಚ ಚೇತರಿಕೆ ನೀಡಿದ್ರು.
ಅಂತಿಮವಾಗಿ ನ್ಯೂಜಿಲ್ಯಾಂಡ್ ತಂಡ 73.1 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 235ರನ್ ಗಳಿಸಿ 7 ರನ್ಗಳ ಹಿನ್ನೆಡೆ ಅನುಭವಿಸಿತು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಶಮಿ 4 ವಿಕೆಟ್ ಬುಮ್ರಾ 3, ಜಡೇಜಾ 2 ಮತ್ತು ಉಮೇಶ್ ಯಾದವ್ ಒಂದು ವಿಕೆಟ್ ಪಡೆದು ಮಿಂಚಿದ್ರು.