ರಾಜ್ಕೋಟ್ (ಗುಜರಾತ್):ಸರಣಿ ಜೀವಂತವಾಗಿರಿಸಿಕೊಳ್ಳಲು ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಕೆಲ ಎಡವಟ್ಟುಗಳಿಂದ ಭಾರತ ತಂಡ ಹೀನಾಯ ಸೋಲು ಕಂಡಿತು. ಈಗ ಆ ತಪ್ಪುಗಳನ್ನು ಸರಿಪಡಿಸಿಕೊಂಡು ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಕೆಲವೊಂದು ಬದಲಾವಣೆಗಳೊಂದಿಗೆ ತಂಡ ಕಣಕ್ಕಿಳಿಯುವ ಸಾಧ್ಯತೆ ಇದೆ.
3ನೇ ಕ್ರಮಾಂಕಕ್ಕೆ ಮರಳಿದ ಕೊಹ್ಲಿ?
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಮರಳುವುದು ಖಾತ್ರಿಯಾಗಿದೆ. ಕಳೆದ ಪಂದ್ಯದಲ್ಲಿ ರಣತಂತ್ರ ರೂಪಿಸಿ 3ನೇ ಕ್ರಮಾಂಕವನ್ನು ಕನ್ನಡಿಗ ಕೆ.ಎಲ್.ರಾಹುಲ್ಗೆ ಬಿಟ್ಟುಕೊಟ್ಟು, ಕಿಂಗ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ವಿಫಲರಾದರು. ಈ ಲೆಕ್ಕಾಚಾರ ತಲೆಕೆಳಗಾದ ಪರಿಣಾಮ ಮತ್ತೆ ಆ ತಪ್ಪುನ್ನು ಮರುಕಳಿಸಬಾರದೆಂದು ಎಚ್ಚರ ವಹಿಸಿ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ. ಇದೀಗ ಕೊಹ್ಲಿ ತಮ್ಮ ನೆಚ್ಚಿನ 3ನೇ ಕ್ರಮಾಂಕದಲ್ಲೇ ಆಡುವುದು ಬಹುತೇಕ ಖಾತ್ರಿಯಾಗಿದೆ ಎಂಬುದು ತಿಳಿದು ಬಂದಿದೆ.
ಕನ್ನಡಿಗ ಮನೀಷ್ಗೆ ಸ್ಥಾನ?
ಮೊದಲ ಪಂದ್ಯದಲ್ಲಿ ಹೆಲ್ಮೆಟ್ಗೆ ಚೆಂಡು ಬಡಿದು ಪೆಟ್ಟು ತಿಂದ ಪರಿಣಾಮ ವಿಕೆಟ್ ಕೀಪರ್ ರಿಷಭ್ ಪಂತ್ಗೆ ವಿಶ್ರಾಂತಿ ನೀಡಲಾಗಿದೆ. ಈಗ ವಿಕೆಟ್ ಕೀಪಿಂಗ್ ಹೊಣೆ ಕೆ.ಎಲ್.ರಾಹುಲ್ ಮೇಲಿದೆ. ಪಂತ್ರಿಂದ ತೆರವಾದ ಸ್ಥಾನಕ್ಕೆ ಕನ್ನಡಿಗ ಮನೀಷ್ ಪಾಂಡೆಗೆ ಅವಕಾಶ ನೀಡುವ ಸಾಧ್ಯತೆ ಇದೆ. ಶ್ರೀಲಂಕಾದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಪಾಂಡೆ ಮಿಂಚಿದ್ದರು.
ಅಷ್ಟೇ ಅಲ್ಲದೆ, ಮೂರು ದಿನಗಳ ಹಿಂದೆ ನಡೆದ ಪಂದ್ಯದಲ್ಲಿ ರಿಷಭ್ ಬದಲಿಗೆ ಫೀಲ್ಡಿಂಗ್ಗೆ ಬಂದಿದ್ದ ಪಾಂಡೆ ಉತ್ತಮವಾಗಿ ಕ್ಷೇತ್ರ ರಕ್ಷಣೆ ಮಾಡಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ. ಒಂದು ವೇಳೆ ಕೇದಾರ್ ಜಾದವ್, ಆಲ್ರೌಂಡರ್ ಶಿವಂ ದುಬೆಗೆ ಅವಕಾಶ ನೀಡಿದರೆ ಪಾಂಡೆ ಮತ್ತೆ ಬೆಂಚ್ ಕಾಯುವುದು ಅನಿವಾರ್ಯ.
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಬೌಲರ್ಗಳ ಬಿಗಿ ಬೌಲಿಂಗ್ ದಾಳಿಗೆ ಭಾರತ 255 ರನ್ಗಳಷ್ಟೇ ಗಳಿಸಲು ಶಕ್ತವಾಗಿತ್ತು. ಗುರಿ ಬೆನ್ನತ್ತಿದ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ನಾಯಕ ಆ್ಯರೋನ್ ಫಿಂಚ್ ಅವರ ಅಜೇಯ ಶತಕಗಳ ನೆರವಿನಿಂದ ವಿಕೆಟ್ ನಷ್ಟವಿಲ್ಲದೆ ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಅಲ್ಲದೆ, 10 ವಿಕೆಟ್ಗಳ ಜಯ ಸಾಧಿಸುವ ಮೂಲಕ ಐತಿಹಾಸಿಕ ದಾಖಲೆಯೂ ಬರೆಯಿತು.
ಆಸ್ಟ್ರೇಲಿಯಾ ತಂಡದ ಆಟಗಾರರನ್ನು ಕಟ್ಟಿಹಾಕಲು ಭಾರತದ ಬೌಲರ್ಗಳು ಸಿದ್ಧಗೊಂಡಿದ್ದಾರೆ. ಒಟ್ಟಾರೆ ಸರಣಿ ಜೀವಂತವಾಗಿಟ್ಟುಕೊಳ್ಳಲು ಟೀಂ ಇಂಡಿಯಾ ಆಟಗಾರರು ಶತಪ್ರಯತ್ನ ನಡೆಸಿದ್ದಾರೆ. ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ರೋಹಿತ್, ವಿರಾಟ್ ಕೊಹ್ಲಿ, ಶ್ರೇಯಸ್ ಪುಟಿದೇಳುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಪಂದ್ಯದ ಸಮಯ: 1.30